ಉಡುಪಿ: ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ತಾಗುತ್ತಿದ್ದು ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.
ಇದೀಗ ಮತ್ತೆ ಹತ್ತು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವರಲ್ಲಿ 9 ಮಂದಿ ಮುಂಬೈನಿಂದ ಜಿಲ್ಲೆಗೆ ಬಂದವರು ಹಾಗೂ ಓರ್ವ ವ್ಯಕ್ತಿ ಕತಾರ್ನಿಂದ ವಿಮಾನ ಮೂಲಕ ವಾಪಸಾಗಿದ್ದರು. ಸೋಂಕಿತರಲ್ಲಿ ಏಳು ಗಂಡು, ಇಬ್ಬರು ಹೆಂಗಸರು ಮತ್ತು ಒಂದು ಹೆಣ್ಣು ಮಗು ಇದೆ. ಮೊನ್ನೆವರೆಗೂ ಕಾರಂಟೈನ್ ಕೇಂದ್ರದಲ್ಲಿ ಇದ್ದ ಇವರನ್ನು ಮನೆಗೆ ಕಳುಹಿಸಲಾಗಿತ್ತು. ಇದೀಗ ಎಲ್ಲಾ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರು ವಾಸವಿದ್ದ ಮನೆಯ 200ಮೀ ಆವರಣವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.
ಸದ್ಯ ಜಿಲ್ಲೆಯಲ್ಲಿ ಒಟ್ಟು 187 ಪ್ರಕರಣ ದಾಖಲಾಗಿದ್ದು, ಈ ಪೈಕಿ 160 ಪ್ರಕರಣಗಳು ಮಹಾರಾಷ್ಟ್ರಕ್ಕೆ ಸೇರಿದವುಗಳಾಗಿವೆ. ಇಷ್ಟು ದಿನಗಳ ಕಾಲ ಕ್ವಾರಂಟೈನ್ ಸೆಂಟರ್ನ ಕಿರಿಕಿರಿಯಿಂದ ರೋಸಿಹೋಗಿದ್ದ ಜಿಲ್ಲಾಡಳಿತ ಈಗ ಜಿಲ್ಲೆಯ ಮೂಲೆಮೂಲೆಯ ಗ್ರಾಮಗಳನ್ನು ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸುವ ಜವಾಬ್ದಾರಿ ನಿರ್ವಹಿಸಬೇಕಾಗಿದೆ.
ಕ್ವಾರಂಟೈನ್ ಮುಗಿಸಿ ಮನೆಗೆ ಬಂದ ವ್ಯಕ್ತಿಗೆ ಸೋಂಕು, ಬೆಳಪು ಸೀಲ್ಡೌನ್:
ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ಕಾಪು ತಾಲೂಕಿನ ಬೆಳಪು ಗ್ರಾಮದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬೆಳಪು ಗ್ರಾಮದ ನಿಗದಿತ ಪ್ರದೇಶಕ್ಕೆ ಆಗಮಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಕೊರೊನಾ ಪಾಸಿಟಿವ್ ಪತ್ತೆಯಾದ ವ್ಯಕ್ತಿಯ ಮನೆ ಪರಿಸರವನ್ನು ಸೀಲ್ಡೌನ್ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಕುಟುಂಬ ಸಮೇತ ಆಗಮಿಸಿದ್ದ ಇವರು ಕಾಪುವಿನಲ್ಲಿ ಸರಕಾರಿ ಕ್ವಾರಂಟೈನ್ ಮುಗಿಸಿ ಎರಡು ದಿನದ ಹಿಂದೆ ಮನೆಗೆ ಆಗಮಿಸಿದ್ದರು. ಮನೆಗೆ ಬಂದ ಎರಡನೇ ದಿನದಲ್ಲೇ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಜಿಲ್ಲಾಡಳಿತದ ನಿರ್ದೇಶನದಂತೆ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಕೆ. ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.