ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಆತಂಕ ಮುಂದುವರೆದಿದ್ದು, 1,487 ಮಂದಿಯ ವರದಿ ನಿರೀಕ್ಷೆ ಮಾಡಲಾಗುತ್ತಿದೆ. ಇವರಲ್ಲಿ ಬಹುತೇಕರು ಮುಂಬೈನಿಂದ ಉಡುಪಿಗೆ ಬಂದವರು ಎನ್ನಲಾಗಿದ್ದು, ಮತ್ತೆಷ್ಟು ಪಾಸಿಟಿವ್ ಬರುತ್ತೆ ಅನ್ನೋ ಆತಂಕವನ್ನು ಆರೋಗ್ಯ ಇಲಾಖೆ ವ್ಯಕ್ತಪಡಿಸಿದೆ.
ಗುರುವಾರ ಒಂದೇ ದಿನ 26 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. 26ರಲ್ಲಿ 21 ರೋಗಿಗಳಿಗೆ ಮುಂಬೈ ಲಿಂಕ್ ಇದೆ ಎನ್ನಲಾಗಿದೆ. ಯಾವುದೇ ಲಕ್ಷಣವಿಲ್ಲದೆ ಕಾಣಿಸಿಕೊಳ್ಳುತ್ತಿರುವ ಕೊರೊನಾಕ್ಕೆ ಮತ್ತು ರೋಗಿಗಳ ಚಿಕಿತ್ಸೆಗೆ ತುರ್ತು ತಯಾರಿ ನಡೆಸಲಾಗುತ್ತಿದೆ. ಅಲ್ಲದೆ ಮತ್ತೆರಡು ಕೋವಿಡ್ ಆಸ್ಪತ್ರೆ ಇಂದಿನಿಂದ ಆರಂಭವಾಗಲಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ 120 ಬೆಡ್ ಮತ್ತು ಕಾರ್ಕಳ ತಾಲೂಕಿನಲ್ಲಿ 100 ಬೆಡ್ಗಳ ಕೋವಿಡ್ ಆಸ್ಪತ್ರೆಗೆ ಚಾಲನೆ ನೀಡಲಾಗಿದೆ. ಆಯಾ ತಾಲೂಕುಗಳಲ್ಲೇ ಕೊರೊನಾ ಚಿಕಿತ್ಸೆ ನೀಡಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುತ್ತಿದೆ. ತುರ್ತು ಚಿಕಿತ್ಸೆಯ ಅಗತ್ಯವಿದ್ದರೆ ಉಡುಪಿಯ ಆಸ್ಪತ್ರೆಗೆ ರೋಗಿಗಳ ರವಾನೆ ಮಾಡಲಾಗುವುದು ಮತ್ತು ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಒಟ್ಟು 340 ಬೆಡ್ನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.