ಉಡುಪಿ: ಅಜ್ಜರಕಾಡು ಎಂಬಲ್ಲಿ ಸುಮಾರು 110 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಆಸ್ಪತ್ರೆಗೆ ಸಿಎಂ ಭೂಮಿ ಪೂಜೆ ನೆರವೇರಿಸಿದ್ದಾರೆ.
ಈ ವೇಳೆ ಹೂ ವ್ಯಾಪಾರಿಗಳ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿಎಂ, ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಖಾಸಗಿಯಾಗಿ ಅವರು ಹೂವಿನ ವ್ಯಾಪಾರ ಮಾಡಬಹುದು. ಸರ್ಕಾರಿ ಕಾರ್ಯಕ್ರಮದಲ್ಲಿ ಮಾತ್ರ ಹೂಗುಚ್ಛ ಹಾರ - ತುರಾಯಿ ಬೇಡ ಎಂದಿದ್ದೇನೆ.
ಸರ್ಕಾರಿ ಜಾಗದಲ್ಲಿ ಗಾರ್ಡ್ ಆಫ್ ಆನರ್ ಬೇಡ. ಬೆಂಗಳೂರಿಗೆ ಹೋದ ತಕ್ಷಣ ಆದೇಶ ಹೊರಡಿಸುತ್ತೇನೆ. ಪೊಲೀಸ್ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕು. ಯಾರೂ ಕಟೌಟ್ ಹೋರ್ಡಿಂಗ್ ಹಾಕಬೇಡಿ. ಈ ಹಿನ್ನೆಲೆ ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದರು.
ನಾನು ಮುಖ್ಯಮಂತ್ರಿಯಾದರೂ ಈ ನಾಡಿನ ಸೇವಕ. ಈ ಭಾವನೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಕೋವಿಡ್ ಸಂದರ್ಭ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಸಿಎಂ, ಎಲ್ಲ ಸಾವುಗಳು ಸರ್ಕಾರದ ದಾಖಲೆಯಲ್ಲಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಸರ್ಕಾರದ ದಾಖಲೆಯಲ್ಲಿ ಆ ಮಾಹಿತಿ ಇದೆ. ನಿಮ್ಮ ಹೇಳಿಕೆಗೆ ಆಧಾರ ಕೊಟ್ಟರೆ ಪರಿಶೀಲಿಸುತ್ತೇವೆ ಎಂದು ಹೇಳಿದರು.
ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ನಡೆಯಲಿದೆ ಎಂದ ಅವರು, ಉಡುಪಿ ಕೃಷ್ಣನನ್ನು ಹೊರತುಪಡಿಸಿದರೆ ಈ ಭಾಗದ ಜೊತೆ ನನಗೆ ಯಾವುದೇ ಸಂಬಂಧವಿರಲಿಲ್ಲ. ಯಡಿಯೂರಪ್ಪ ಉಡುಪಿಗೆ ನನ್ನನ್ನು ಉಸ್ತುವಾರಿ ಮಾಡಿದ್ದರು. ಉಡುಪಿಗೆ ಯಾಕೆ ನನ್ನನ್ನು ಉಸ್ತುವಾರಿ ಮಾಡಿದ್ದರೋ ಗೊತ್ತಿಲ್ಲ. ಉಡುಪಿಯ ಜನರು ಹೃದಯವೈಶಾಲ್ಯ ಉಳ್ಳವರು. ನಮ್ಮ ಕಷ್ಟಕ್ಕೆ ಪರಿಹಾರ ಕೇಳುತ್ತಾರೆ ವಿನಃ ವೈಯಕ್ತಿಕವಾಗಿ ಏನೂ ಕೇಳುವುದಿಲ್ಲ.
ಉಡುಪಿಯ ಉಸ್ತುವಾರಿಯಿಂದ ಮುಕ್ತಗೊಳಿಸಿ ಎಂದು ಕೇಳುತ್ತಿದ್ದೆ. ಸಿಎಂ ಆಗುವ ಮೂಲಕ ಉಸ್ತುವಾರಿಯಿಂದ ಮುಕ್ತನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಉಡುಪಿಯ ಜನತೆ ಸದಾ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಹೊಗಳಿದರು.
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡುಪಿಯಲ್ಲಿ ಸರಾಸರಿ ಪಾಸಿಟಿವಿಟಿ 2.60 ಇದೆ. ದ.ಕ ಬಾರ್ಡರ್ ಆಗಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ. ಕೇರಳ- ಮಹಾರಾಷ್ಟ್ರ ಜೊತೆ ನಿಕಟ ಸಂಪರ್ಕ ಇರುವ ಉಡುಪಿಯಲ್ಲಿ ಪಾಸಿಟಿವ್ ಇರುವವರನ್ನು ಜನರನ್ನು ಟ್ರ್ಯಾಕ್ ಮಾಡಬೇಕು. ಶೇ. 85 ಜನ ಹೋಮ್ ಐಸೋಲೇಶನ್ ಇದ್ದಾರೆ. ಜಿಲ್ಲೆಯ ಆರೋಗ್ಯ ಇಲಾಖೆ ಜಿಲ್ಲೆಯ ನಾಲ್ಕು ಕಡೆ ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪಿಸುತ್ತೇವೆ. ಮೈಕ್ರೋ ಕಂಟೇನ್ಮೆಂಟ್ ಝೋನ್ ರಚನೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.