ಉಡುಪಿ: ಜಿಲ್ಲೆಯಲ್ಲಿ ನಡೆದಿದ್ದ ಒಂದು ವರ್ಷದ ಮಗುವಿನ ಅಪಹರಣ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ಕಾರೂರು ಸಮೀಪದ ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದ್ದು ಪ್ರಕರಣದ ಸುತ್ತ ಹುಟ್ಟಿಕೊಂಡಿದ್ದ ಹಲವು ಅನುಮಾನಗಳು ನಿವಾರಣೆಯಾಗಿವೆ.
ಕುಂದಾಪುರ ತಾಲೂಕಿನ ಯಡಮೊಗೆಯ ಕುಮ್ಟಿಬೇರು ಎಂಬಲ್ಲಿ ಗುರುವಾರ ಮುಂಜಾನೆ ಸಂತೋಷ್ ನಾಯ್ಕ್ ಎಂಬುವವರ ಪತ್ನಿ ರೇಖಾ ಹಾಗೂ ಇಬ್ಬರು ಮಕ್ಕಳು ಮಲಗಿದ್ದಾಗ ಅಪರಿಚಿತನೋರ್ವ ಬಂದು ಸಾನ್ವಿಕಾ ಎಂಬ ಮಗುವನ್ನು ಅಪಹರಣ ಮಾಡಿದ್ದ. ಬಳಿಕ ಮನೆ ಬಳಿಯ ಕುಬ್ಜಾ ನದಿಯಲ್ಲಿ ಸಾಗಿದ ಆತ ಪರಾರಿಯಾಗಿದ್ದ. ತಾನು ಹಾಗೂ ಇನ್ನೋರ್ವ ಮಗ ನೀರಿಗಿಳಿದು ಮಗುವನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೆ ಅಪಹರಣಕಾರ ಮಗುವನ್ನು ಹಿಡಿದುಕೊಂಡು ಪರಾರಿಯಾಗಿದ್ದ ಎಂದೆಲ್ಲಾ ಮಗುವಿನ ತಾಯಿ ರೇಖಾ ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಈ ಬಗ್ಗೆ ಖುದ್ದು ಉಡುಪಿ ಎಸ್ಪಿ ನಿಶಾ ಜೇಮ್ಸ್ ಸ್ಥಳದಲ್ಲಿ ಸಂಜೆಯವರೆಗೂ ಹಾಜರಿದ್ದು ತನಿಖೆಗೆ ಮಾರ್ಗದರ್ಶನ ನಡೆಸಿ ಹಲವರನ್ನು ವಿಚಾರಣೆಗೊಳಪಡಿಸಿದ್ರು. ಪ್ರಕರಣದ ಗಂಭೀರತೆ ಅರಿತ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿತ್ತು. ಸಾರ್ವಜನಿಕರು ಕೂಡ ಕುಬ್ಜಾ ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ಮನೆಯಿಂದ ಅರ್ಧ ಕಿ.ಮೀ. ದೂರದ ಕಾರೂರು ಎಂಬಲ್ಲಿನ ಹೊಳೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗುವುದರೊಂದಿಗೆ ಅಪಹರಣ ನಾಟಕಕ್ಕೆ ಟ್ವಿಸ್ಟ್ ಸಿಕ್ಕಿದೆ.
ವಾಸ್ತವ ಸಂಗತಿಯೇನಂದ್ರೆ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸಿ ತನ್ನ ಮಕ್ಕಳನ್ನು ಕರೆದುಕೊಂಡು ಹೊಳೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅಕಸ್ಮಾತ್ ಒಂದು ಮಗು ನೀರಿಗೆ ಬಿದ್ದು ಮೃತಪಟ್ಟಿರುವುದು ತನಿಖೆಯಿಂದ ಗೊತ್ತಾಗಿದೆ. ಮಗುವಿನ ತಾಯಿ ಭಯದಿಂದ ಪೊಲೀಸರಿಗೆ ತಪ್ಪು ದೂರು ನೀಡಿದ್ದಳು. ಇದೀಗ ತಾಯಿ ವಿರುದ್ಧ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸದ್ಯ ಮಗುವಿನ ತಾಯಿಗೆ ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್ ಜೊತೆಗೆ ಚಿಕಿತ್ಸೆ ನೀಡಲಾಗ್ತಾ ಇದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.