ಉಡುಪಿ: ಮಂಗಳೂರು ಉಗ್ರ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧನ ವಿಚಾರ ಖಚಿತಪಡಿಸದ ಗೃಹಸಚಿವ ಬಸವರಾಜ ಬೊಮ್ಮಾಯಿ ಕಾನೂನು ಪ್ರಕ್ರಿಯೆಗಳ ಪ್ರಕಾರ ತನಿಖೆ ನಡೆಯುತ್ತಿದೆ ಎಂದರು.
ಮಂಗಳೂರು ಪೊಲೀಸರ ಸಂಪರ್ಕದಲ್ಲಿದ್ದು, ಕೆಲಸ ಮಾಡುತ್ತಿದ್ದೇವೆ. ಇನ್ನು ಇಂತಹ ಗೋಡೆ ಬರಹಗಳಿಗೆ ಗ್ರಫೈಟಿ ರೈಟಿಂಗ್ ಎನ್ನುತ್ತಾರೆ. ಇವೆಲ್ಲವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕದಡಲು ಪ್ರಯತ್ನ ಪಡುವ ಶಕ್ತಿಗಳು ನಡೆಸುವ ಕೃತ್ಯ. ಯುರೋಪ್, ಇರಾಕ್, ಸೌದಿ ಅರೇಬಿಯಾ ದೇಶಗಳಲ್ಲೂ ಈ ತರಹದ ಬರಹಗಳು ಕಂಡುಬಂದಿದೆ ಎಂದರು.
ನಕ್ಸಲರು ಪಾಂಪ್ಲೆಟ್ಗಳನ್ನು ಬಿತ್ತುವ ರೀತಿಯಲ್ಲಿ ಇವರು ಗೋಡೆ ಬರಹಳನ್ನು ಬರೆಯುತ್ತಾರೆ. ಇಂದು ಅಥವಾ ನಾಳೆ ಆರೋಪಿಯನ್ನು ಪೊಲೀಸರು ಬಂಧಿಸುತ್ತಾರೆ. ಈ ಕೃತ್ಯದ ಹಿಂದೆ ಯಾವ ಸಂಘಟನೆ ಇದೆ ಅನ್ನೋದನ್ನು ಶೀಘ್ರವೇ ಪತ್ತೆ ಹಚ್ಚಲಾಗುತ್ತದೆ ಎಂದರು.
ಮಂಗಳೂರು ಒಂದು ಸೂಕ್ಷ್ಮ ಪ್ರದೇಶವಾಗಿದೆ. ನೈಟ್ ರೌಂಡ್ಸ್ ಹೆಚ್ಚುಮಾಡಲು ಸೂಚಿಸಿದ್ದೇನೆ. ಡಿಸಿಪಿಗಳು ನೈಟ್ ರೌಂಡ್ಸ್ ಮಾಡುವಂತೆ ಕಮೀಷನರ್ರಿಗೆ ತಿಳಿಸಿದ್ದೇನೆ. ಡಾರ್ಕ್ ಸ್ಪಾಟ್ಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡುತ್ತೇವೆ. ಸಿಸಿ ಕ್ಯಾಮೆರಾ ಹಾಳಾಗಿರುವ ವಿಚಾರ ಗಮನಕ್ಕೆ ಬಂದಿದೆ. ಹೊಸ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.