ಉಡುಪಿ: 2024ರಲ್ಲಿ ಉಡುಪಿ ಶ್ರೀ ಕೃಷ್ಣನ ಪೂಜಾಧಿಕಾರ ಪರ್ಯಾಯ ಕೃಷ್ಣಾಪುರ ಮಠದಿಂದ ಪುತ್ತಿಗೆ ಮಠಕ್ಕೆ ಹಸ್ತಾಂತರ ಆಗಲಿದೆ. ಪರ್ಯಾಯ ಒಂದು ವರ್ಷ ಮುಂಚಿತವಾಗಿ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತವೆ. ಇಂದು ಪುತ್ತಿಗೆ ಮಠದ ವತಿಯಿಂದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಮೊದಲ ಬಾಳೆ ಮುಹೂರ್ತವನ್ನು ನೆರವೇರಿಸಲಾಯಿತು.
ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಠದ ಹಿತ್ತಲ ತೋಟದಲ್ಲಿ ಬಾಳೆ ಗಿಡವನ್ನು ನೆಡುವ ಮೂಲಕ ಸಂಪ್ರದಾಯ ನೆರವೇರಿಸಿದರು. ಬಳಿಕ ವಿವಿಧ ಬಿರುದಾವಳಿಗಳ ಮೂಲಕ ಪಂಚ ವಾದ್ಯ ಒಳಗೊಂಡ ಮೆರವಣಿಗೆ ನೆರವೇರಿತು.
2024 ಜನವರಿ ತಿಂಗಳಲ್ಲಿ ಪುತ್ತಿಗೆ ಮಠದ ಶ್ರೀ ಕೃಷ್ಣ ಪೂಜಾಧಿಕಾರ ಆರಂಭವಾಗುತ್ತದೆ. ಅದಕ್ಕೂ ಮುನ್ನ ಒಂದು ವರ್ಷ ಒಂದು ತಿಂಗಳು ಮುಂದೆ ಬಾಳೆ ಮುಹೂರ್ತವನ್ನು ನೆರವೇರಿಸಲಾಗುತ್ತದೆ. ಇಂದು ಬಾಳೆ ಮುಹೂರ್ತ ಸಂದರ್ಭದಲ್ಲಿ ಸಾವಿರಾರು ಭಕ್ತರಿಗೆ ಬಾಳೆ ಗಿಡಗಳನ್ನು ಮಠ ವಿತರಿಸಿದೆ. ಅಲ್ಲದೇ ಬಾಳೆ ಬೆಳೆದು ಅನ್ನಬ್ರಹ್ಮನ ಕ್ಷೇತ್ರದಲ್ಲಿ ಪ್ರತಿದಿನ ಪ್ರಸಾದ ವ್ಯವಸ್ಥೆಗೆ ಬಾಳೆ ಎಲೆ ಮತ್ತು ಬಾಳೆ ಹಣ್ಣನ್ನು ಸಮರ್ಪಿಸುವ ವಿನೂತನ ಯೋಜನೆಗೆ ಇಂದು ಚಾಲನೆ ಕೊಡಲಾಗಿದೆ.
ಭಾವೀ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೋಟಿ ಗೀತಾ ಲೇಖನ, ಪಾರ್ಥಸಾರಥಿ ರಥ, ಕೃಷ್ಣಯಜ್ಞಯಾಗ, ಮಧ್ವ ವೃತ್ತ, ಪ್ರವಾಸಿಮಂದಿರ, ಭಗವದ್ಗೀತೆಯ ಅಂತಾರಾಷ್ಟ್ರೀಯ ಸಮ್ಮೇಳನ ಸೇರಿದಂತೆ ಪರ್ಯಾಯದ ಯೋಜನೆಗಳನ್ನು ಇಂದು ಘೋಷಣೆ ಮಾಡಿದರು.
ಇದನ್ನೂ ಓದಿ: ಮಲಗಿರುವ ಕೃಷ್ಣನ ಎಚ್ಚರಿಸಲು ಜಾಗರಪೂಜೆ.. ಶ್ರೀಕೃಷ್ಣ ಮಠದಲ್ಲಿ ವಿಶೇಷ ಆರಾಧನೆ