ಉಡುಪಿ: ಅಯೋಧ್ಯ ರಾಮ ಜನ್ಮಭೂಮಿ ಟ್ರಸ್ಟ್ನ ಸಭೆಯು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ಟ್ರಸ್ಟ್ ವಿಶ್ವಸ್ಥರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮ ಮಂದಿರ ವಿಚಾರವಾಗಿ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ವಿಶ್ವಪ್ರಸನ್ನ ತೀರ್ಥರು, ಮುಂದೆ ನಿರ್ಮಾಣವಾಗಲಿರುವ ಅಯೋಧ್ಯ ರಾಮ ಮಂದಿರ ಜಾಗದ ಸುಮಾರು 200 ಅಡಿ ಆಳದಲ್ಲಿ ಭೂಮಿಯ ಸಾಮರ್ಥ್ಯ ಹೇಗಿದೆ ಎನ್ನುವ ಅಧ್ಯಯನ ಈಗಾಗಲೇ ಆರಂಭವಾಗಿದೆ. ಎಲ್ ಆಂಡ್ ಟಿ ಕಂಪನಿ ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಅಲ್ಲದೇ 200 ಅಡಿ ಆಳದಲ್ಲಿ ತಾಮ್ರ ಪತ್ರ ಇರಿಸಲು ತೀರ್ಮಾನ ಮಾಡಲಾಗಿದ್ದು, ತಾಮ್ರ ಪತ್ರದಲ್ಲಿ ಬರೆಯಬೇಕಾದ ವಿವರದ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣವಾಗಲಿದ್ದು, 70 ಎಕರೆ ಪರಿಸರ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಅವಶ್ಯಕತೆ ಇದೆ. ಹಣ ಹೊಂದಿಸುವ ಬಗ್ಗೆಯೂ ಚರ್ಚಿಸಲಾಗಿದ್ದು, ಬೇರೆ ಬೇರೆ ಕಂಪನಿಗಳ ಸಿಎಸ್ಆರ್ ಫಂಡ್ ಮೂಲಕ ಹಣ ಸಂಗ್ರಹ ಮಾಡಲಾಗುವುದು. ಪ್ರತಿ ವ್ಯಕ್ತಿಯಿಂದ 10 ರೂಪಾಯಿ ಹಾಗೂ ಪ್ರತಿ ಮನೆಯಿಂದ ನೂರು ರೂಪಾಯಿ ಸಂಗ್ರಹಕ್ಕೆ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.
ನ. 25 ರಿಂದ ಡಿ. 25 ರ ವರೆಗೆ ದೇಶಾದ್ಯಂತ ವ್ಯಾಪಕ ಆಂದೋಲನಕ್ಕೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಭೂಮಿ ಪೂಜಾ ಕಾರ್ಯ ಯಾವಾಗ ನಡೆಸುವುದು ಎಂದು ಶೀಘ್ರ ತೀರ್ಮಾನ ಕೈಗೊಂಡು, ಹದಿನೈದು ದಿನಗಳ ಬಳಿಕ ಭೂಮಿ ಪೂಜೆಯ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.