ಉಡುಪಿ: ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವ ಅಣ್ಣಾಮಲೈ ಅವರು ಇನ್ನೂ 10 ವರ್ಷ ಸೇವೆ ಸಲ್ಲಿಸಬಹುದಿತ್ತು ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಅಣ್ಣಾಮಲೈ ಒಬ್ಬ ದಕ್ಷ ಅಧಿಕಾರಿಯಾಗಿದ್ದರು. ಅವರೀಗ ರಾಜಕೀಯಕ್ಕೆ ಹೋಗುತ್ತಾರೆಂಬ ಚರ್ಚೆ ನಡೆಯುತ್ತಿದೆ. ಅಣ್ಣಾಮಲೈ ರಾಜಕೀಯ ಪ್ರವೇಶಕ್ಕೆ ನನ್ನ ವಿರೋಧ ಇಲ್ಲ. ಆದರೆ ಇನ್ನೂ 10 ವರ್ಷ ಪೊಲೀಸ್ ಸೇವೆ ಮಾಡಬಹುದಿತ್ತು. ಇಷ್ಟು ಬೇಗ ರಾಜಕೀಯ ಪ್ರವೇಶ ಬೇಕಿತ್ತಾ? ಎಂಬುದು ತಮ್ಮ ಅಭಿಪ್ರಾಯ ಎಂದು ಶ್ರೀಗಳು ಹೇಳಿದರು.
ಇನ್ನು ರಾಜಕೀಯದಲ್ಲಿ ಸೋಲು ಗೆಲುವಿಗೆ ಸಿದ್ಧವಾಗಿರಬೇಕು. ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಸೋಲು ಕಾಣದ ವ್ಯಕ್ತಿ. ರಾಜಕೀಯದಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಧ್ಯವಿಲ್ಲ. 10 ವರ್ಷ ತಡವಾಗಿ ರಾಜಕೀಯಕ್ಕೆ ಸೇರಬಹುದಿತ್ತು. ರಾಜಕೀಯಕ್ಕೆ ವಯಸ್ಸಿನ ಮಿತಿ ಇಲ್ಲ. ರಾಜಕಾರಣ ಸೇರ್ಪಡೆಗೆ ನಿರ್ಧರಿಸಿದ್ದರೆ ಅದಕ್ಕೂ ಪ್ರಾರ್ಥಿಸುತ್ತೇನೆ. ಅಣ್ಣಾಮಲೈಗೆ ಎಲ್ಲಿ ಹೋದರೂ ಒಳ್ಳೆದಾಗಲಿ. ರಾಜಕೀಯ ಕ್ಷೇತ್ರ ಶುದ್ಧಿ ಮಾಡಲು ಅವರು ಸಮರ್ಥರು ಎಂದು ಶ್ರೀಗಳು ಅಭಿಪ್ರಾಯಪಟ್ಟರು.