ಉಡುಪಿ : ಕೊರೊನಾ ಸೋಂಕನ್ನು ಹುಲಿಯಂತೆ ಬಿಂಬಿಸಲಾಗುತ್ತಿದೆ. ಆದರೆ, ಅದು ಹುಲಿಯಲ್ಲ, ಇಲಿ ಎಂದು ಕೊರೊನಾ ಮುಕ್ತವಾದ ಕುಟುಂಬವೊಂದು ಜನರಲ್ಲಿ ಆತ್ಮಸ್ಥೈರ್ಯ ತುಂಬ ರೀತಿಯಲ್ಲಿ ಹೇಳಿಕೊಂಡಿದೆ.
ಉಡುಪಿ ತಾಲೂಕು ಕೋಟದ ಉದ್ಯಮಿ ಉಮೇಶ್ ಪ್ರಭು ಎಂಬುವರ ಕುಟುಂಬದ ಏಳು ಮಂದಿ ಹಾಗೂ ಅವರ ನಾಲ್ವರು ಕೆಲಸಗಾರರಿಗೆ ಜುಲೈ 7ರಂದು ಕೊರೊನಾ ಸೋಂಕು ತಗುಲಿತ್ತು. ಇದೀಗ ಅವರೆಲ್ಲರೂ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಈ ಕುರಿತು ಉದ್ಯಮಿ ಉಮೇಶ್ ಪ್ರಭು ಅವರು ತಮ್ಮ ಕುಟುಂಬದ ಜತೆಗೆ ಸೇರಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ನನ್ನ 85 ವರ್ಷದ ತಾಯಿ, 56 ವರ್ಷದ ಪತ್ನಿ ಹಾಗೂ 4 ತಿಂಗಳ ಹಸುಗೂಸು ಸೇರಿ ಕುಟುಂಬದ 7 ಮಂದಿಗೆ ಕೋವಿಡ್-19 ಸೋಂಕು ತಗುಲಿತ್ತು. ಇದೀಗ ಅವರೆಲ್ಲರೂ ಹತ್ತು ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ.
ಆದ್ದರಿಂದ ಕೊರೊನಾ ಬಂದರೆ ಯಾರೂ ಹೆದರಬೇಕಿಲ್ಲ. ಕೊರೊನಾ ಅಂದ್ರೆ ಹುಲಿಯಂತೆ ಬಿಂಬಿಸಲಾಗುತ್ತಿದೆ. ಆದರೆ, ಅದು ಹುಲಿಯಲ್ಲ, ಇಲಿ. ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿಸುವ ಕೆಲಸ ಮಾಡಬೇಕು. ಕೊರೊನಾಗೆ ಧೈರ್ಯವೇ ಮದ್ದು, ನಮ್ಮ ಕುಟುಂಬಸ್ಥರು ಗುಣಮುಖರಾಗಲು ಕಾರಣರಾದ ಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿಗೆಲ್ಲ ಧನ್ಯವಾದಗಳು ಎಂದು ಹೇಳಿದ್ದಾರೆ.