ತುಮಕೂರು: ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಫಿಟ್ವೆಲ್ ಟೂಲ್ಸ್ ಆ್ಯಂಡ್ ಪೋರ್ಜಿಂಗ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ, ಕಾರ್ಯ ನಿರ್ವಹಿಸುತ್ತಿರುವ ನೂರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲಸ ಕಾಯಂ ಮಾಡಬೇಕು, ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ, ಸಿಐಟಿಯು ಸಂಘಟನೆಯೊಂದಿಗೆ ಕಾರ್ಖಾನೆಯ ಮುಂದೆ ಕಳೆದ 26 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಾಗಲಿ, ಆಡಳಿತ ಮಂಡಳಿಯಾಗಲಿ ಯಾರೂ ಸಹ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸುತ್ತಿಲ್ಲ.
ಈ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಅನೇಕ ಕಾರ್ಮಿಕರು ಕೈ ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಇಂಥಹವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕಾರ್ಮಿಕ ಟಿ.ಆರ್ ಸುಜಿತ್, ಕಳೆದ ಹನ್ನೆರಡು - ಹದಿಮೂರು ವರ್ಷಗಳಿಂದ ದುಡಿಯುತ್ತಿದ್ದರೂ ಕಾರ್ಮಿಕರಿಗೆ ಕೆಲಸ ಕಾಯಂ ಮಾಡಿಲ್ಲ. ಸೇವಾ ಭದ್ರತೆ ಇಲ್ಲ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಕಳೆದ ಒಂದು ವರ್ಷದ ಮುಂಚೆಯೇ ಈ ಕಾರ್ಖಾನೆಯ ಆಡಳಿತ ಮಂಡಳಿ ನಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿತ್ತು. ಆದರೆ ಇಲ್ಲಿಯವರೆಗೂ ನಮ್ಮ ಸಮಸ್ಯೆಯನ್ನು ಬಗೆಹರಿಸಿಲ್ಲ. ನಮ್ಮ ಸಮಸ್ಯೆಗೆ ಆಡಳಿತ ಮಂಡಳಿ ಸ್ಪಂದಿಸದಿದ್ದರೆ ಕಾರ್ಮಿಕ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.