ತುಮಕೂರು : ಮದ್ಯದಂಗಡಿ ಮುಚ್ಚುವಂತೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತುಮಕೂರು ತಾಲೂಕಿನ ರಾಮಗೊಂಡನಹಳ್ಳಿ ಗೇಟ್ ಬಳಿ ನಡೆದಿದೆ.
ಮದ್ಯದಂಗಡಿ ಮುಚ್ಚಲು ಒತ್ತಾಯಿಸಿ ಮಹಿಳೆಯರು ರಸ್ತೆತಡೆ ಕೂಡ ನಡೆಸುತ್ತಿದ್ದರು. ಇತ್ತೀಚೆಗೆ ರಾಮಗೊಂಡನಹಳ್ಳಿ ಕಾಲೋನಿಯಲ್ಲಿ ವಿಪರೀತ ಮದ್ಯ ಸೇವನೆಯಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದನು. ಕುಡಿತದ ಅಮಲಿನಲ್ಲಿ ಗ್ರಾಮದಲ್ಲಿ ಸಹೋದರ ನಡುವೆ ಗಲಾಟೆಯಾಗಿ ಕೊಲೆ ನಡೆದಿತ್ತು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಮಹಿಳೆಯರು ರಸ್ತೆ ತಡೆ ನಡೆಸಿದ್ರು.
ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯರನ್ನು ಮನವೊಲಿಸಲು ಸತತ ಪ್ರಯತ್ನ ನಡೆಸಿದರೂ ಬಗ್ಗದೆ ಪ್ರತಿಭಟನಾಕಾರರು ಮದ್ಯದಂಗಡಿ ಮುಚ್ಚುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದರು. ಆದರೆ, ಅಂಗಡಿ ಮುಚ್ಚದ ಕಾರಣ ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿ ಇಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.