ತುಮಕೂರು / ಪಾವಗಡ: 2005ರಲ್ಲಿ ತಾಲೂಕಿನ ವೆಂಕಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಪೊಲೀಸ್ ಹತ್ಯಾಕಾಂಡದ 12 ನೇ ಆರೋಪಿಯಾಗಿದ್ದ ತೆಲಂಗಾಣ ಕ್ರಾಂತಿಕಾರಿ, ಕವಿ ಗದ್ದರ್ ಪಾವಗಡ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದರು.
ಘಟನೆ ಹಿನ್ನಲೆ:
2005ರಲ್ಲಿ ಚಿಕ್ಕಮಗಳೂರಿನಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್‌ನನ್ನು ಪೊಲೀಸರು ಎನ್ಕೌಂಟರ್ಗೆ ಗುರಿಪಡಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ 2005 ಫೆ.10 ರಂದು ಸರ್ಕಾರಿ ಶಾಲೆಯಲ್ಲಿ ತಂಗಿದ್ದ 7 ಜನ ಕೆಎಸ್ಆರ್ಪಿ ಪೊಲೀಸರು ಹಾಗೂ ಒಬ್ಬ ನಾಗರಿಕನನ್ನು ನಕ್ಸಲರು ನಾಡ ಬಾಂಬ್ ಮತ್ತು ಗ್ರೆನೇಡ್ ದಾಳಿಯಿಂದ ಹತ್ಯೆ ಮಾಡಿದ್ದರು. ಈ ಸಂಬಂಧ ತಿರುಮಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡನೇ ಆರೋಪ ಪಟ್ಟಿಯಲ್ಲಿ 30 ಜನರ ವಿರುದ್ಧ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ 12ನೇ ಆರೋಪಿಯಾಗಿದ್ದ ಗದ್ದರ್ ಅಲಿಯಾಸ್ ಗುಮ್ಮಡಿ ವಿಠಲ ರಾವ್ ಕರ್ನಾಟಕ ಹೈಕೋರ್ಟ್ನಲ್ಲಿ ಜಾಮೀನು ಪಡೆದಿದ್ದರು. ನ್ಯಾಯಾಲಯ ಹತ್ತು ದಿನಗಳ ಒಳಗಾಗಿ ಪಾವಗಡ ನ್ಯಾಯಾಲಯಕ್ಕೆ ಹಾಜಾರಾಗುವಂತೆ ಸೂಚಿಸಿದ್ದ ಕಾರಣ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗದ್ದರ್, ಹೈಕೋರ್ಟ್ ನಿರ್ದೇಶನದಂತೆ ಪಾವಗಡ ನ್ಯಾಯಾಲಯಕ್ಕೆ ಹಾಜಾರಾಗಿದ್ದು, ನನಗೆ ಜಾಮೀನು ದೊರೆತಿದೆ. ಇಲ್ಲಿನ ನ್ಯಾಯಾಲಯಕ್ಕೆ ಪೊಲೀಸ್ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮತ್ತೆ ಬಂದಾಗ ಪ್ರಕರಣದ ಪೂರ್ಣ ಮಾಹಿತಿ ನೀಡುವೆ ಎಂದು ಹೇಳಿ ನಿರ್ಗಮಿಸಿದ್ರು.