ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಜಿಲ್ಲೆಯಲ್ಲಿ ಪಠ್ಯೇತರ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇನ್ನೊಂದೆಡೆ ಬಹುತೇಕ ಶಿಕ್ಷಕರು ಪೂರಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಚಿತ್ರಕಲಾ ಶಿಕ್ಷಕರು ಒಂದು ಹೆಜ್ಜೆ ಮುಂದೆ ಹೋಗಿ ಶಾಲಾ ಕೊಠಡಿ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ಗಳನ್ನು ಆಯ್ಕೆ ಮಾಡಿಕೊಂಡ ಚಿತ್ರಕಲಾ ಶಿಕ್ಷಕರ ತಂಡ ವಿವಿಧ ವರ್ಣಗಳಿಂದ ಕೊಠಡಿಗಳನ್ನು ಸಿಂಗರಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡುವಿಕೆ ಭೀತಿ ದೂರವಾದ ನಂತರ ಆರಂಭಗೊಳ್ಳಲಿರುವ ಶಾಲೆಗಳಿಗೆ ಬರುವಂತಹ ಎಲ್ಕೆಜಿ ಮತ್ತು ಯುಕೆಜಿ ಮಕ್ಕಳ ಮನಸ್ಸಿಗೆ ಮುದ ನೀಡುವಂತಹ ಕಾರ್ಟೂನ್ಗಳನ್ನು ಕೊಠಡಿ ಗೋಡೆಗಳ ಮೇಲೆ ಬಿಡಿಸುತ್ತಿದ್ದಾರೆ.
ಛೋಟಾ ಭೀಮ್ ಕಥೆಯನ್ನಾಧರಿಸಿ ಅಂತಹ ಪಾತ್ರಗಳು, ಮಿಕ್ಕಿ ಮೌಸ್ ಪರಿಸರ ಸಂಬಂಧಪಟ್ಟಂತಹ ಚಿತ್ರಗಳು ಗೋಡೆಗಳ ಮೇಲೆ ಸ್ಥಾನ ಪಡೆದುಕೊಂಡಿದೆ. ಇದು ಪುಟ್ಟ ಮಕ್ಕಳಿಗೆ ಸಂತಸ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೇ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಇಂತಹ ವಾತಾವರಣ ಸೃಷ್ಟಿ ಮಾಡಬೇಕೆಂಬ ಉದ್ದೇಶ ಈ ಚಿತ್ರಕಲಾ ಶಿಕ್ಷಕರದ್ದಾಗಿದೆ.
ತುಮಕೂರು ತಾಲೂಕು ವ್ಯಾಪ್ತಿಯಲ್ಲಿ 12 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಇಂತಹ ಚಿತ್ತಾರವನ್ನು ಮೂಡಿಸಲಾಗುತ್ತಿದೆ. ತಂಡಗಳನ್ನಾಗಿ ಮಾಡಿಕೊಂಡು ಚಿತ್ರಕಲಾ ಶಿಕ್ಷಕರು ಇಂತಹ ಅಪರೂಪದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರಕಲಾ ಶಿಕ್ಷಕರ ಈ ಕೆಲಸ ಸಾಕಷ್ಟು ಶ್ಲಾಘನೆಗೆ ಪಾತ್ರವಾಗಿದೆ.