ತುಮಕೂರು: ಶಾಸಕ ಉಮೇಶ್ ಕತ್ತಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂಬ ನೋವಿದೆ. ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿನ್ನೆ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಉಮೇಶ್ ಕತ್ತಿ ಜೊತೆ ಕುಳಿತು ಮಾತನಾಡಿದ್ದೇವೆ. ಮಾಜಿ ಶಾಸಕ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನೂ ಕರೆದು ಮಾತನಾಡುತ್ತೇನೆ ಎಂದು ಹೇಳಿದರು.
ಹಿಂದೆಂದೂ ಕಾಣದಂತಹ ನೆರೆಹಾವಳಿಯಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ಸಚಿವರನ್ನು ನೆರೆಪೀಡಿತ ಪ್ರದೇಶಗಳಿಗೆ ಕಳಿಸಿಕೊಟ್ಟಿದ್ದೇನೆ. ಇಂತಹ ಸಂಕಷ್ಟ ಕಾಲ ಹೋಗಲಿ ಹಾಗೂ ರೈತ ನೆಮ್ಮದಿಯಿಂದ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕಾಗಿ ಸಿದ್ದಗಂಗಾ ಮಠದ ವತಿಯಿಂದ ಚೆಕ್‌ನ ಮುಖ್ಯಮಂತ್ರಿ ಯಡಿಯೂರಪ್ಪಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಶಾಸಕರಾದ ಜ್ಯೋತಿಗಣೇಶ್, ಮಸಾಲೆ ಜಯರಾಮ ಮತ್ತಿತರರು ಹಾಜರಿದ್ದರು.