ತುಮಕೂರು: ದೇವಸ್ಥಾನದ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಮಹಿಳೆ ಸೇರಿದಂತೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕು ಮಿಡಿಗೇಶಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ರಾಮಾಂಜನೇಯ (48) ಹಾಗೂ ಶಿಲ್ಪಾ (36) ಕೊಲೆಗೀಡಾದವರು. ಘಟನೆಯಲ್ಲಿ ಮಲ್ಲಿಕಾರ್ಜುನಯ್ಯ ಎಂಬುವರಿಗೂ ಕೂಡ ಗಂಭೀರ ಗಾಯಗಳಾಗಿವೆ.
ಕೋರ್ಟ್ ಮೆಟ್ಟಿಲೇರಿದ ಜಾಗದ ವಿಚಾರ: ಮಿಡಿಗೇಶಿ ಗ್ರಾಮದ ಶ್ರೀಧರ್ ಗುಪ್ತಾ ಎಂಬುವರು ಗಣಪತಿ ದೇವಸ್ಥಾನದ ಜಾಗ ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪವಿದೆ. ಇದರ ಸಂಬಂಧ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಗ್ರಾಮಸ್ಥರ ಪರವಾಗಿ ತೀರ್ಪು ನೀಡಿತ್ತು.
ದೇವಸ್ಥಾನದ ಪರ ರಾಮಾಂಜನೇಯ ಹಾಗೂ ಶಿಲ್ಪಾ ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ರೊಚ್ಚಿಗೆದ್ದ ಶ್ರೀಧರ್ ಗುಪ್ತ ಹಾಗೂ ಸಹಚರರು ನಿನ್ನೆ ರಾತ್ರಿ ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ಲಭ್ಯವಾಗಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಲ್ಲಿಕಾರ್ಜುನಯ್ಯ ಅವರನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಿಡಿಗೇಶಿ ಗ್ರಾಮಕ್ಕೆ ತೆರಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಪರಿಸ್ಥಿತಿ ಅವಲೋಕಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಘಟನೆ ಬಗ್ಗೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿನ್ನಕ್ಕಾಗಿ ಮಹಿಳೆ ಕೊಲೆ, ಗೆಳೆಯನ ಸಿಲುಕಿಸುವ ಯತ್ನ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?