ತುಮಕೂರು : ಹೇಮಾವತಿ ನಾಲೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಇಸ್ಲಾಂಪುರ ಗ್ರಾಮದ ಬಳಿ ನಡೆದಿದೆ. ಮಹಮ್ಮದ್ ನಯೀಮ್ (7) ಮಿಸ್ಬಾಬಾನು(9) ಅಸುನೀಗಿರುವ ದುರ್ದೈವಿಗಳು. ಒಟ್ಟು ಮೂವರು ಮಕ್ಕಳು ನಾಲೆಗೆ ಕಾಲುಜಾರಿ ಬಿದ್ದಿದ್ದು, ಮೂವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಹ್ಮದ್ ಬಿಲಾಲ್ (10) ಪ್ರಾಣಾಪಾಯದಿಂದ ಪಾರಾಗಿರುವ ಬಾಲಕನಾಗಿದ್ದಾನೆ.
ಇನ್ನು ಮಾಹಿತಿ ಸ್ಥಳಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಯಿಂದ ನಾಲೆಯಲ್ಲಿ ಕೊಚ್ಚಿ ಹೋಗಿರುವ ಮಿಸ್ಬಾಬಾನು ಎಂಬ ಬಾಲಕಿಯ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮೂವರು ಮಕ್ಕಳು ನಾಲೆಗೆ ಬಿದ್ದಿದ್ದಿನ್ನು ಗಮನಿಸಿದ ಸ್ಥಳೀಯ ಯುವಕ, ಮಹ್ಮದ್ ಬಿಲಾಲ್ ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳನ್ನು ರಕ್ಷಿಸಿ ತಾಯಿ ಸಾವು : ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಬದುಕಿಸಿ ತಾಯಿಯೊಬ್ಬಳು ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಜುಲೈ 2 ರಂದು ಭಾನುವಾರ ನಡೆದಿತ್ತು. ಮನು (30) ಮೃತಪಟ್ಟ ಮಹಿಳೆ. ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ಕೆರೆಗೆ ಜಾರಿ ಬಿದ್ದಿದ್ದರು. ಇದನ್ನು ಕಂಡ ತಾಯಿ ಕೆರೆಗೆ ಹಾರಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿದ್ದರು. ಆದರೆ ಈಜು ಬರದೇ ಅವರು ಸಾವನ್ನಪ್ಪಿದ್ದರು. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಸಾವು : ಇತ್ತೀಚಿಗೆ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನೀಲಾದ್ರಿ ಬಳಿಯ ಕ್ವಾರಿಯಲ್ಲಿ ನಡೆದಿತ್ತು. ಮೂವರೂ 10ನೇ ತರಗತಿಯಲ್ಲಿ ಓದುತ್ತಿದ್ದರು. ಕಿರಣ್ (13) ತೀರ್ಥ(13) ಹಾಗೂ ಫೈಜಲ್ (14) ಮೃತ ವಿದ್ಯಾರ್ಥಿಗಳು. ಆಟ ಆಡಲು ಹೋಗಿದ್ದ ತೀರ್ಥ ಮತ್ತು ಫೈಜಲ್ ರಾತ್ರಿ ಆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಎಲ್ಲೆಡೆ ಹುಡುಕಾಡಿದ್ದರು. ಇದಾದ ನಂತರ, ಬೆಳಗ್ಗೆ ಕೆರೆ ಬಳಿ ಬಾಲಕರ ಸೈಕಲ್, ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿದ್ದು, ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಈಜು ಬಾರದಿದ್ದರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿತ್ತು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಜುಕೊಳದಲ್ಲಿ ಬಾಲಕರು ಮುಳಗಿ ಸಾವು: ದಾವಣಗೆರೆಯ ದೇವರಾಜ ಅರಸು ಬಡಾವಣೆಯಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ನವೀಕರಣಗೊಂಡು ಲೋಕಾರ್ಪಣೆಯಾಗಿದ್ದ ಈಜುಕೊಳಕ್ಕೆ ಈಜಲು ತೆರಳಿದ್ದ ಬಾಲಕರಿಬ್ಬರು ಮೇ.19 ರಂದು ಮುಳುಗಿ ಸಾವನ್ನಪ್ಪಿದ್ದರು. ಮೃತರನ್ನು ದಾವಣಗೆರೆ ನಗರದ ಬೀಡಿ ಲೇಔಟ್ನ ನಿವಾಸಿಗಳೆಂದು ಗುರುತಿಸಲಾಗಿತ್ತು. ಈಜುಕೊಳಕ್ಕಾಗಮಿಸಿದ ಇಬ್ಬರು ಬಾಲಕರಿಗೆ ಈಜು ಬಾರದ ಕಾರಣ ಮೃತಪಟ್ಟಿದ್ದರು.
ಇದನ್ನೂ ಓದಿ : ತುಮಕೂರು: ಕೆರೆಗೆ ಬಿದ್ದ ಇಬ್ಬರು ಮಕ್ಕಳ ಪ್ರಾಣ ಉಳಿಸಿ ಕೊನೆಯುಸಿರೆಳೆದ ತಾಯಿ