ತುಮಕೂರು: ಇಂದು ನಡೆಯಬೇಕಿದ್ದ ಜಿಲ್ಲಾ ಪಂಚಾಯಿತಿ ಸಭೆಯನ್ನು ಕೋರಂ ಕೊರತೆಯಿಂದ ಜನವರಿ 25ಕ್ಕೆ ಮುಂದೂಡಲಾಗಿದೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿ, ಇಂದು ಸಭೆಯನ್ನು ಕರೆಯಲಾಗಿತ್ತು, ಅವಿಶ್ವಾಸ ನಿರ್ಣಯ ಹಿನ್ನೆಲೆ ಇಂದು ಯಾವ ಸದಸ್ಯರೂ ಸಹ ಸಭೆಗೆ ಹಾಜರಾಗಿಲ್ಲ. ಹಾಗಾಗಿ ಇಂದು ನಡೆಯಬೇಕಿದ್ದ ಸಭೆಯನ್ನು ದಿನಾಂಕ 25 ರಂದು ನಿಗದಿ ಮಾಡಲಾಗಿದ್ದು, ಅಂದು ನಡೆಯಲಿರುವ ಸಭೆಯಲ್ಲಿ ನನಗೆ ವಿಶ್ವಾಸ ನಿರ್ಣಯ ಮಾಡಲಿದ್ದಾರೆ ಎಂಬ ನಂಬಿಕೆಯಿದೆ ಎಂದರು.
ಶಿರಾ ಉಪಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು, ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಎಂದು ಇದೇ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಸದಸ್ಯೆ ಶಾಂತಲಾ ರಾಜಣ್ಣ ಮಾತನಾಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಇಂದು ಅವಿಶ್ವಾಸ ನಿರ್ಣಯ ಮಂಡನೆ ಮಾಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಮುಂದಾಗಿದ್ದರು. ಅಧ್ಯಕ್ಷರ ಪರವಾಗಿ ವಿಶ್ವಾಸ ಮಂಡನೆ ಮಾಡಲು ನಮಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ನಿಂದ ಸೂಚನೆ ಬಂದಿದೆ. ಹಾಗಾಗಿ ಇಂದಿನ ಸಭೆಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಜರಾಗಿಲ್ಲ. ಜಿಲ್ಲಾ ಪಂಚಾಯಿತಿಯ ಚುನಾವಣೆ ಮುಂದಿನ ಮೂರು ತಿಂಗಳಲ್ಲಿ ನಡೆಯಲಿದೆ. ಉಳಿದ ಮೂರು ತಿಂಗಳಲ್ಲಿ ಇರುವ ಅಧ್ಯಕ್ಷರನ್ನು ಸ್ಥಾನದಿಂದ ಇಳಿಸಿ, ಮತ್ತೊಬ್ಬರನ್ನು ಅಧ್ಯಕ್ಷರ ಸ್ಥಾನಕ್ಕೆ ಸೇರಿಸುವುದು ಎಷ್ಟರಮಟ್ಟಿಗೆ ಸಮಂಜಸ ಎಂದರು.
ಕಳೆದ ಐದಾರು ತಿಂಗಳಿನಿಂದ ಅವಿಶ್ವಾಸ ನಿರ್ಣಯ ಮಾಡುತ್ತಿರುವ ಬಗ್ಗೆ ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮನ್ನೆಲ್ಲ ಉದ್ದೇಶಿಸಿ ಈ ರೀತಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಬುದ್ಧಿವಾದ ಹೇಳಿದ್ದರು. ಹಾಗಾಗಿ ನಿರ್ಣಯ ಮಾಡಲಾಗಿತ್ತು. ಕೋರ್ಟಿನ ಆದೇಶದಂತೆ ಇಂದು ಸಭೆಯನ್ನು ಕರೆಯಲಾಗಿತ್ತು, ಆದರೆ ಯಾವ ಸದಸ್ಯರೂ ಸಭೆಗೆ ಹಾಜರಾಗಿಲ್ಲ. ಕೋರಂ ಕೊರತೆಯಿಂದ ಇಂದು ನಡೆಯಬೇಕಿದ್ದ ಸಭೆಯನ್ನು ಜನವರಿ 25ಕ್ಕೆ ಮುಂದೂಡಲಾಗಿದೆ ಎಂದರು.
ಇದನ್ನೂ ಓದಿ:ನಾಳೆ ಅಥವಾ ನಾಡಿದ್ದು ಖಾತೆ ಹಂಚಿಕೆ: ಸಿಎಂ ಬಿ.ಎಸ್.ಯಡಿಯೂರಪ್ಪ