ತುಮಕೂರು: ಹಣಕಾಸು ವಿಷಯಕ್ಕೆ ಸಂಬಂಧಪಟ್ಟಂತೆ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ನಗರದ ಮೊಹಮದ್ ರೆಹಾನ್ ಬಂಧಿತ ಆರೋಪಿ. ಜಯನಗರ ಬಡಾವಣೆಯ ಮಧುಕುಮಾರಿ ಎಂಬ ಮಹಿಳೆಯನ್ನು ಡಿ.25ರಂದು ಕೊಲೆ ಮಾಡಿ ಗುಬ್ಬಿ ತಾಲೂಕಿನ ಅವೇರಹಳ್ಳಿ ಗ್ರಾಮದ ಸರ್ವೆ ನಂ.79ರ ಸರಕಾರಿ ಗೋಮಾಳದ ಹೇಮಾವತಿ ನಾಲೆಯ ಪಕ್ಕದಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದನು. ಈ ಸಂಬಂಧ ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಕೊಲೆ ರಹಸ್ಯ ಬಹಿರಂಗ..
ಆರೋಪಿ ಮಹಮದ್ ರೆಹಾನ್ನಿಂದ ಮಧುಕುಮಾರಿಯು 4ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದಳು. ಸಾಲದ ಹಣವನ್ನು ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ರೆಹಾನ್ಗೆ ಮಧುಕುಮಾರಿ ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಡಿ.25ರ ರಾತ್ರಿ 7.30ರಲ್ಲಿ ತುಮಕೂರಿನ ಮಾರುತಿ ನಗರದಿಂದ ಚರ್ಚ್ಗೆ ಹೋಗಿ ಬರೋಣವೆಂದು ಹೇಳಿ ಕಾರಿನಲ್ಲಿ ರೆಹಾನ್ ಕಾರಿನಲ್ಲಿ ಕರೆದುಕೊಂಡು ಹೋಗಿದ್ದನು.
ತುಮಕೂರು ತಾಲೂಕಿನ ನಾಗವಲ್ಲಿಯಿಂದ ಸುಮಾರು 10 ಕಿ.ಮೀ. ದೂರದ ರಸ್ತೆಯ ಪಕ್ಕದಲ್ಲಿ ರಾತ್ರಿ ಸುಮಾರು 10.15ರಲ್ಲಿ ಮೂತ್ರ ಮಾಡಲು ಕಾರನ್ನು ನಿಲ್ಲಿಸಿದ್ದಾನೆ. ಈ ವೇಳೆ ಮಧುಕುಮಾರಿ ಕೊರಳಿನಲ್ಲಿ ಇದ್ದ ವೇಲ್ನಿಂದ ಕುತ್ತಿಗೆಯನ್ನು ಬಿಗಿಯಾಗಿ ಎಳೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಶವವನ್ನು ಅವೇರಹಳ್ಳಿ ಬಳಿಯ ನಾಲೆಯ ಪಕ್ಕ ಸರಕಾರಿ ಗೋಮಾಳದ ಜಾಗದಲ್ಲಿ ಶವವನ್ನು ಬಿಸಾಡಿದ್ದನು.
ಆರೋಪಿ ಮಹಮದ್ ರಹಾನ್ ಮತ್ತು ಕೊಲೆಗೀಡಾಗಿರುವ ಮಧುಕುಮಾರಿಗೂ ದೈಹಿಕ ಸಂಬಂಧ ಮತ್ತು ಹಣಕಾಸಿನ ವ್ಯವಹಾರವೂ ಇತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಹಿಳೆಯ ಕೊಲೆ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತಂಡವು ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿತ್ತು.