ತುಮಕೂರು:ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ರೈತರು ಹಾಗೂ ಯುವಕ - ಯುವತಿಯರು, ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಲಲಿತಾ ರವೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ದಕ್ಷಿಣ ಭಾರತ ಆಗ್ರೋ ಎಕ್ಸ್ ಪೋ ಕೃಷಿ ಮತ್ತು ಪೂರಕ ವಸ್ತುಪ್ರದರ್ಶನ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಹಳ್ಳಿಯ ಜನರಿಗೆ ಉಪಯುಕ್ತವಾಗಲಿದೆ. ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆಯ ಪ್ರಮುಖ ಪಾತ್ರವಹಿಸುತ್ತದೆ. ಸಣ್ಣ ಕೈಗಾರಿಕೆ ಹಾಗೂ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ವಿಚಾರ ಎಂದರು.
ಕೃಷಿಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕಿದೆ. ಅದರಲ್ಲೂ ಯುವಕ ಯುವತಿಯರು ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಉಳಿದವರಿಗೆ ಮಾರ್ಗದರ್ಶಕರಾಗಬೇಕು ಎಂದು ಸಲಹೆ ನೀಡಿದರು. ವಸ್ತು ಪ್ರದರ್ಶನದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳು, ಗುಡಿಕೈಗಾರಿಕೆಯ ವಸ್ತುಗಳನ್ನು ಪ್ರದರ್ಶಿಸಲಾಯಿತು.