ತುಮಕೂರು: ತರಗತಿಗಳಲ್ಲಿ ಕುಳಿತುಕೊಂಡು ಪಾಠ ಕೇಳಲು ಸರಿಯಾಗಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಬೋರ್ಡ್ ಮೇಲೆ ಶಿಕ್ಷಕರು ಬರೆಯುವುದು ಕಾಣಿಸುವುದಿಲ್ಲ ಜೊತೆಗೆ ಸರಿಯಾದ ಬೆಂಚ್ಗಳಿಲ್ಲ ಒಡೆದುಹೋದ ಕಿಟಕಿಗಳಿಂದ ಸೊಳ್ಳೆಗಳು ನಿತ್ಯ ತೊಂದರೆ ನೀಡುತ್ತವೆ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.
ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಸಮಸ್ಯೆಗಳ ಆಗರವಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜಾಹ್ನವಿ ಮಾತನಾಡಿ, ಈ ಕೊಠಡಿಯ ಪಕ್ಕದಲ್ಲಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಗಲಾಟೆ ಮಾಡುವುದರಿಂದ ಸರಿಯಾಗಿ ಪಾಠ ಕೇಳಲಾಗುತ್ತಿಲ್ಲ. ಜೊತೆಗೆ ಅವರ ಗಲಾಟೆಯಿಂದ ಶಿಕ್ಷಕರಿಗೆ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು, ಈ ಕೊಠಡಿಯಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. ಲೈಟ್ ಹಾಕಿದರೂ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇದರ ಜೊತೆಗೆ ಪಕ್ಕದಲ್ಲಿರುವ ಪದವಿ ಕಾಲೇಜಿನಲ್ಲಿ ಯಾವುದಾದರೂ ಕಾಮಗಾರಿ ನಡೆಯುತ್ತಿರುತ್ತೆ. ಅವರು ಬೀಡಿ, ಸಿಗರೇಟ್ ಸೇದುವ ವಾಸನೆಯೂ ಬರುತ್ತದೆ, ಕಾಲೇಜಿಗೆ ಸಂಬಂಧ ಇಲ್ಲದೆ ಇರುವವರು ಕಾಲೇಜಿನ ಒಳಗೆ ಬರುವುದು, ಹೋಗುವುದು ಮಾಡುವುದರಿಂದ ಕಾಲೇಜಿನ ವಾತಾವರಣ ಹಾಳಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕಾಲೇಜಿನ ಪ್ರಾಂಶುಪಾಲರಿಗೆ ಎಷ್ಟು ಬಾರಿ ಮನವಿ ಮಾಡಿಕೊಂಡರು ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ಬೋರ್ಡ್, ಕೊಠಡಿಗಳ ಸಮಸ್ಯೆ ಅಲ್ಲದೇ ಮಳೆಗಾಲದಲ್ಲಿ ಕೊಠಡಿಗಳ ಒಳಗೆ ಮಳೆ ನೀರು ನುಗ್ಗುವ ಜತೆಗೆ ಸೊಳ್ಳೆಗಳ ಸಮಸ್ಯೆಯೂ ಹೆಚ್ಚಾಗಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಕರಿಲ್ಲ ಎಂದು ವಿದ್ಯಾರ್ಥಿ ಶ್ರೀಕಾಂತ್ ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕಿದೆ. ಆ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನೆರವಾಗಬೇಕಿದೆ.