ತುಮಕೂರು: ಸೆಪ್ಟೆಂಬರ್ 2ರಂದು ವಿಶ್ವ ತೆಂಗು ದಿನವಾಗಿ ಆಚರಿಸಲ್ಪಡಲಾಗುತ್ತಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿಯೇ ಕರ್ನಾಟಕ ಹೆಚ್ಚು ತೆಂಗು ಬೆಳೆಯುವ ಪ್ರದೇಶಗಳ ಸಾಲಿನಲ್ಲಿ 2ನೇ ಸ್ಥಾನದಲ್ಲಿದೆ. ನಂತರ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ಎಂದು ಗುರುತಿಸಲ್ಪಟ್ಟಿದೆ.
ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕಿನಲ್ಲಿ ಅತಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಅದರಲ್ಲೂ ತಿಪಟೂರು ಟಾಲ್ ಎಂಬ ತೆಂಗು ತಳಿ ಸಾಕಷ್ಟು ಹೆಸರುವಾಸಿಯಾಗಿದ್ದು, ಭಾರೀ ಬೇಡಿಕೆ ಇದೆ. ಜಿಲ್ಲೆಯಲ್ಲಿ ತೆಂಗು ಸಾಂಪ್ರದಾಯಿಕ ಬೆಳೆಯಾಗಿದೆ. ಈ ವರ್ಷ ಅತಿ ಹೆಚ್ಚು ತೆಂಗು ಬೆಳೆ ವಿಸ್ತರಣೆಯಾಗಿರೋದು ಕೂಡ ಇಲ್ಲಿ ಗಮನಾರ್ಹ ಅಂಶವಾಗಿದೆ.
ಜಿಲ್ಲೆಯಲ್ಲಿ 1,82,393 ಹೆಕ್ಟೇರ್ನಲ್ಲಿ ತೆಂಗು ಬೆಳೆ ವಿಸ್ತರಿಸಿಕೊಂಡಿದೆ. ಅದೇ ರೀತಿ ತೆಂಗಿನ ಉಪಉತ್ಪನ್ನಗಳಾದ ಕೊಬ್ಬರಿ ಉತ್ಕೃಷ್ಟ ಗುಣಮಟ್ಟದಿಂದ ಕೂಡಿರುತ್ತದೆ. ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಕೂಡ ತಿಪಟೂರಿನಲ್ಲಿದೆ.
ದಕ್ಷಿಣ ಏಷ್ಯಾದಲ್ಲಿ ಮೊದಲಿಗೆ ತೆಂಗು ಬೆಳೆ ಕಾಣಬಹುದಾಗಿತ್ತು. ನಂತರ ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ತುಮಕೂರು ಜಿಲ್ಲೆಯನ್ನು ತೆಂಗು ಬೆಳೆಗೆ ಆಯ್ಕೆಮಾಡಿಕೊಳ್ಳಲಾಗಿದೆ. ಈ ಮೂಲಕ ರೈತರು ದ್ವಿಗುಣ ಲಾಭ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ.
ಇದನ್ನೂ ಓದಿ: ಹದಗೆಟ್ಟ ಪುಟಪಾಕ - ಚಿತ್ತಾಪುರ ರಾಜ್ಯ ಹೆದ್ದಾರಿ.. ಜನರಿಂದ ಹಿಡಿಶಾಪ