ತುಮಕೂರು: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೆಂಗು ಉತ್ತೇಜನಕ್ಕೆ ಪೂರಕವಾಗಿ ಕಳೆದ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದ್ದ ತೆಂಗು ಪಾರ್ಕ್ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಜಿಲ್ಲೆಯ ಶಾಸಕರು ಒಕ್ಕೊರಲಿನಿಂದ ತೆಂಗು ಪಾರ್ಕ್ ಆರಂಭಕ್ಕೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ, ಉಪ ಉತ್ಪನ್ನಗಳ ಸದ್ಭಳಕೆ, ತರಬೇತಿ ಹೀಗೆ ಕಲ್ಪವೃಕ್ಷಕ್ಕೆ ಸಂಬಂಧಿಸಿದ ಮಹತ್ವದ ಸಂಶೋಧನೆಗಳು, ಬೆಳೆಗಾರರಿಗೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಗಳನ್ನು ನೀಡುವುದು, ತೆಂಗಿನ ಮೌಲ್ಯವರ್ಧನೆಯ ಮಾದರಿಗಳನ್ನು ತೋರಲು ಪಾರ್ಕ್ ವೇದಿಕೆ ಒದಗಿಸಿ ಕೊಡಲಿದೆ.
ಅತಿ ಹೆಚ್ಚು ತೆಂಗು ಬೆಳೆಯುವ ತಾಲೂಕುಗಳಾದ ತುರುವೇಕೆರೆ, ತಿಪಟೂರು, ತುಮಕೂರು, ಚಿಕ್ಕನಾಯಕನಹಳ್ಳಿ ಭಾಗದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತೆಂಗು ಪಾರ್ಕ್ ಯೋಜನೆ ಅನುಷ್ಠಾನಕ್ಕೆ ಹಸಿರು ನಿಶಾನೆ ದೊರೆತಿತ್ತು. ನಂತರದ ದಿನಗಳಲ್ಲಿ ಶಿರಾ ತಾಲೂಕಿನ ಮಾನಂಗಿ ಮತ್ತು ತುರುವೇಕೆರೆ ತಾಲೂಕಿನ ಚಿಕ್ಕಪುರದಲ್ಲಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿ ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಸಹ ಬಿಡುಗಡೆ ಮಾಡಿತ್ತು. ಆದ್ರೆ 2018ರಲ್ಲಿ 1.75 ಕೋಟಿ ರೂ. ಹಣ ಮತ್ತು ಅದರ ಬಡ್ಡಿ ಹಣವನ್ನು ವಾಪಸ್ ಕಳಿಸುವಂತೆ ಸರ್ಕಾದ ಅಧೀನ ಕಾರ್ಯದರ್ಶಿ ಕೇಂದ್ರಕ್ಕೆ ಪತ್ರ ಬರೆದು ಸೂಚಿಸಿದ್ದರು. ಅದರಂತೆ ಹಣ ಕೂಡ ವಾಪಸ್ ಹೋಗಿತ್ತು. ಇದರಿಂದಾಗಿ ತೆಂಗು ಅಭಿವೃದ್ಧಿ ಕನಸು ಕಮರಿಹೋಗಿತ್ತು.
ಇದೀಗ ಮತ್ತೊಮ್ಮೆ ಜಿಲ್ಲೆಯಲ್ಲಿ ತೆಂಗು ಪಾರ್ಕ್ ನಿರ್ಮಾಣದಿಂದ ಜಿಲ್ಲೆಯ ತೆಂಗು ಬೆಳೆಗಾರರಿಗೆ ಆಗುವಂತಹ ಅನುಕೂಲಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅಲ್ಲದೆ ಕೃಷಿ ಪೂರಕವಾದ ವಾತಾವರಣ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಂ ಹೇಳಿದ್ದಾರೆ.