ತುಮಕೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದಲಿತ ಹಿತರಕ್ಷಣಾ ಸಮಿತಿ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕರೆದಿರುವುದನ್ನು ರದ್ದುಪಡಿಸಿ, ಪೊಲೀಸ್ ಚಿಲುಮೆ ಅಥವಾ ಬಾಲಭವನದಲ್ಲಿ ನಡೆಸುವಂತೆ ಆಗ್ರಹಿಸಿ ಜಿಲ್ಲಾ ದಲಿತ ಸಂಘಟನೆಗಳ ಮುಖಂಡರ ಒಕ್ಕೂಟ ಹಾಗೂ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ತುಮಕೂರು ಉಪವಿಭಾಗ ಮಟ್ಟದ ಎಸ್ಸಿ-ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಇದೇ ತಿಂಗಳ 21ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತದೆ. ಸಾಕಷ್ಟು ದಲಿತ ಮುಖಂಡರಲ್ಲಿ ಸ್ಕ್ರೀನ್ ಟಚ್ ಮೊಬೈಲ್ ಇಲ್ಲದ ಕಾರಣ. ಈ ಸಭೆಯನ್ನು ಸಮುದಾಯ ಭವನಗಳಲ್ಲಿ ನಡೆಸುವ ಮೂಲಕ ಎಸ್ಸಿ- ಎಸ್ಟಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹೆಚ್. ಜಿ. ರಂಗನಾಥ್, ಕೋವಿಡ್-19 ಹಿನ್ನೆಲೆಯಲ್ಲಿ ಎಸ್ಸಿ-ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ತುಮಕೂರು ಉಪ ವಿಭಾಗ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಸೆಪ್ಟೆಂಬರ್ 21ರಂದು ದಿನಾಂಕ ನಿಗದಿ ಪಡಿಸಲಾಗಿದೆ. ಈ ವಿಡಿಯೋ ಕಾನ್ಫರೆನ್ಸ್ ಸಭೆಯನ್ನು ರದ್ದುಗೊಳಿಸಿ, ಸಮುದಾಯ ಭವನಗಳಲ್ಲಿ ಈ ಸಭೆ ನಡೆಸಬೇಕು. ಏಕೆಂದರೆ ನಮ್ಮ ನಾಯಕರಲ್ಲಿ ಹಲವಾರು ಮಂದಿ ಸ್ಕ್ರೀನ್ ಟಚ್ ಮೊಬೈಲ್ ಬಳಸುತ್ತಿಲ್ಲ. ಜೊತೆಗೆ ನೇರವಾಗಿ ಸಭೆ ನಡೆಸಿದಾಗಲೂ ನಮ್ಮ ಸಮಸ್ಯೆಗಳು ಬಗೆಹರಿದಿಲ್ಲ. ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆ ಇಲ್ಲ. ಹಾಗಾಗಿ ಸಮುದಾಯ ಭವನಗಳು ಖಾಲಿಯಿದ್ದು, ಆ ಪ್ರದೇಶಗಳಲ್ಲಿ ಸಭೆ ನಡೆಸಬೇಕೆಂದು ಒತ್ತಾಯಿಸಿದರು.