ತುಮಕೂರು : ಕೊರೊನಾ ಸೋಂಕು ಹರಡುವಿಕೆ ಭೀತಿ ನಡುವೆಯೂ ಈಗಾಗಲೇ ಹತ್ತನೇ ತರಗತಿ ಹಾಗೂ 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಯೋಜನೆ ಪ್ರಾರಂಭ ಮಾಡಿರೋದ್ರಿಂದಾಗಿ ಜಿಲ್ಲೆಯಲ್ಲಿ ಮಕ್ಕಳು ಶಾಲೆ ಕಡೆ ಮುಖ ಮಾಡಿದ್ದಾರೆ.
ಇನ್ನು ಶಾಲೆಗೆ ಹಾಜರಾಗಿರುವ ಮಕ್ಕಳ ದಾಖಲಾತಿಯಲ್ಲಿ ಮುಖ್ಯವಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಠ-ಪ್ರವಚನಗಳನ್ನು ಕೇಳುತ್ತಿದ್ದಾರೆ. ಆದರೆ, 6 ರಿಂದ 9ನೇ ತರಗತಿಯವರೆಗೆ ಅತಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸುತ್ತಿರುವುದು ಇಲ್ಲಿ ಗಮನಾರ್ಹ ಅಂಶ.
ಓದಿ: ಕೊರೊನಾ ಭೀತಿ ನಡುವೆ ಶಾಲಾ-ಕಾಲೇಜು ಹಾಜರಾತಿಯಲ್ಲಿ ಸುಧಾರಣೆ: ಶಿಕ್ಷಣ ಇಲಾಖೆ ಮಾಹಿತಿ
ತುಮಕೂರು ಜಿಲ್ಲೆಯ ಆರು ತಾಲೂಕುಗಳಲ್ಲಿ ಶೇ. 30.37ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 6819, ಗುಬ್ಬಿ 4097, ಕುಣಿಗಲ್ 6593, ತಿಪಟೂರು 6155, ತುಮಕೂರು 9700, ತುರುವೇಕೆರೆಯಲ್ಲಿ 3208 ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಪಾಠ ಕೇಳುತ್ತಿದ್ದಾರೆ.
ಶೇಕಡವಾರು ಹಾಜರಾತಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು 50.32ರಷ್ಟು, ಅತಿ ಕಡಿಮೆ ತುಮಕೂರು ತಾಲೂಕಿನಲ್ಲಿ 18.72 ರಷ್ಟು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. 6 ರಿಂದ 10ನೇ ತರಗತಿವರೆಗೆ 1,22,079 ಮಕ್ಕಳು ಶಾಲೆಗೆ ಬರಬೇಕಿತ್ತು. ಆದರೆ, ಕೇವಲ 37,072 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ.66ರಷ್ಟು ಮಕ್ಕಳ ಹಾಜರಾತಿ ಇದ್ದು, 61,826 ಮಕ್ಕಳ ಪೈಕಿ 41,240 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ಶಿರಾ ತಾಲೂಕಿನಲ್ಲಿ 12,542 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ಪಾವಗಡ 9748, ಮಧುಗಿರಿ11,129, ಕೊರಟಗೆರೆ 7,821 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ.
11,047 ಮಂದಿ ಶಿಕ್ಷಕರ ಪೈಕಿ, 7907 ಶಿಕ್ಷಕರು ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು ಶಾಲೆಗೆ ಹಾಜರಾಗಿದ್ದಾರೆ. ಇವರ್ಯಾರಿಗೂ ಕೊರೊನಾ ಸೋಂಕು ತಗುಲಿರುವುದಿಲ್ಲ. ಜಿಲ್ಲೆಯಲ್ಲಿ 11 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು ತಗಲಿದ್ದು, ಅವರೆಲ್ಲರೂ ಹೋಮ್ ಕ್ವಾರಂಟೈನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಬ್ಬಿ ತಾಲೂಕಿನಲ್ಲಿ ಆರು ಮಂದಿ ಶಿಕ್ಷಕರು, ತುರುವೇಕೆರೆ ಹಾಗೂ ತಿಪಟೂರು ತಾಲೂಕಿನಲ್ಲಿ ತಲಾ ಇಬ್ಬರು, ಕುಣಿಗಲ್ ತಿಪಟೂರು ತಾಲೂಕಿನಲ್ಲಿ ತಲಾ ಓರ್ವ ಶಿಕ್ಷಕ ಸೋಂಕಿಗೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗಿರೋದು ಇದರಿಂದ ಕಾಣಬಹುದಾಗಿದೆ.