ತುಮಕೂರು: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಳು ಎಂಬ ಒಂದೇ ಒಂದು ಕಾರಣಕ್ಕೆ ಅಪ್ರಾಪ್ತ ಮಗಳನ್ನ ಹತ್ಯೆ ಮಾಡಿರುವ ಪೋಷಕರನ್ನು ಗುಬ್ಬಿ ತಾಲೂಕಿನ ಚೇಳೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಚೇಳೂರು ಹೋಬಳಿ, ಚಿಕ್ಕ ಹೆಡಿಗೆಹಳ್ಳಿಯ ದ್ವಿತೀಯ ಪಿಯು ವಿದ್ಯಾರ್ಥಿನಿ ಪಾಲಕರಿಂದಲೇ ಕೊಲೆಯಾದ ದುರ್ದೈವಿ ಮಗಳಾಗಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿದ್ಯಾರ್ಥಿನಿಯ ತಂದೆ ಪರಶುರಾಮ, ಸಹೋದರ ಶಿವರಾಜು, ಚಿಕ್ಕಪ್ಪ ತುಕಾರಾಂ ಎಂಬುವರನ್ನು ಚೇಳೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆಯ ಫುಲ್ ಡಿಟೇಲ್ಸ್ ಹೀಗಿದೆ: ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿನಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಒಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಅಷ್ಟೇ ಅಲ್ಲ ಪ್ರೀತಿಸಿದ ಹುಡುಗನನ್ನೇ ಮದುವೆಯಾಗಲು ಕೂಡ ನಿರ್ಧರಿಸಿದ್ದಳು ಎಂದು ಗೊತ್ತಾಗಿದೆ. ಇದೇ ವೇಳೆ, ಕಳೆದ ಗುರುವಾರ ಇಬ್ಬರು ಮನೆ ಬಿಟ್ಟು ಕಣ್ಮರೆಯಾಗಿದ್ದರಂತೆ.
ಜೂನ್ 9ರಂದು ವಿದ್ಯಾರ್ಥಿನಿ ಮನೆಗೆ ಹಿಂದಿರುಗಿದ್ದಾಳೆ. ಆಗ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಬಿಂಬಿಸಿದ್ದರು. ಅಷ್ಟೇ ಅಲ್ಲ ಮಗಳ ಮೃತ ದೇಹವನ್ನು ಅಗ್ನಿಸ್ಪರ್ಶ ಮಾಡಿದ್ದರು. ಆತ್ಮಹತ್ಯೆ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ದೂರಿನ ಮೇರೆಗೆ ಪಾಲಕರನ್ನು ಕರೆಸಿ ವಿಚಾರಣೆ ನಡೆಸಿದ ಶಿರಾ ಡಿ ವೈ ಎಸ್ಪಿ ನವೀನ್ ಕುಮಾರ್, ಮರ್ಯಾದೆಗೆ ಅಂಜಿ ಈ ಹತ್ಯೆ ಮಾಡಲಾಗಿದೆ ಎಂದು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ಈ ಬಗ್ಗೆ ತುಮಕೂರು ಎಸ್ಪಿ ಹೇಳಿದ್ದಿಷ್ಟು: ’’ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಸಾಕ್ಷಿಯ ನಾಶ ಪ್ರಕರಣದ ಅಡಿ ಪಾಲಕರ ವಿರುದ್ಧ ಶಿರಾ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಪೋಷಕರು ಬಿಂಬಿಸಿದ್ದರು. ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಘಟನೆ ಸಂಬಂಧ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅವರುಗಳು ಮಗಳನ್ನು ಕೊಲೆ ಮಾಡಿರುವ ಕುರಿತು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Mysore crime: ಪತ್ನಿಯ ಶೀಲ ಶಂಕಿಸಿ ಹತ್ಯೆ.. ಬಳಿಕ ತಾನೇ ಪೊಲೀಸರಿಗೆ ಶರಣಾದ ಪತಿ