ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದಲ್ಲಿ ರಸ್ತೆಬದಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿರುವ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಆರೋಪಿಸಿದೆ.
ಇಂದು ಹುಳಿಯಾರಿನಲ್ಲಿ ಸಂಘದ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಂಗಡಿ ಕಳೆದುಕೊಂಡ ಸಂತ್ರಸ್ತರು ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಅಲ್ತಾಫ್ ಮಾತನಾಡಿದರು. 2014ರ ಸರ್ಕಾರದ ಅಧಿ ನಿಯಮದ ಪ್ರಕಾರ ಪರ್ಯಾಯವಾಗಿ ಜಾಗ ಕಲ್ಪಿಸದೆ ಏಕಾಏಕಿ ನೂರಾರು ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದ್ರು.
ರಸ್ತೆ ಬದಿ ಗೂಡಂಗಡಿಗಳನ್ನು ಕಳೆದುಕೊಂಡಿರುವ ಸಂತ್ರಸ್ತರ ಬದುಕು ಅತಂತ್ರವಾಗಿದೆ. ಅಲ್ಲದೆ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರು ಸ್ತ್ರೀಶಕ್ತಿ ಸಂಘಗಳು ಮತ್ತು ವಿವಿಧೆಡೆ ಸಾಲ ಮಾಡಿ ವ್ಯಾಪಾರ ನಡೆಸುತ್ತಿದ್ದರು. ಹೀಗಾಗಿ ಅವರ ಬದುಕು ಬೀದಿಗೆ ಬಿದ್ದಿದೆ ಎಂದು ನೋವು ತೋಡಿಕೊಂಡರು.