ತುಮಕೂರು: ‘ನಮ್ಮ ಗ್ರಾಮಕ್ಕೂ ಪಡಿತರ ಕಳುಹಿಸಿ’ ಎಂದು ಕೇಳಿದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ತಿಪಟೂರು ಶಾಸಕ ನಾಗೇಶ್ ಉಡಾಫೆಯಿಂದ ಉತ್ತರ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ನಿಮಗೆಲ್ಲಾ ಕೆಲಸ ಕೊಟ್ಟಿದ್ದೇನಲ್ಲಾ, ಅದರ 20 ಪರ್ಸೆಂಟ್ ದುಡ್ಡು ತಂದು ಕೊಡು. ಬೇರೆ ಎಂಎಲ್‌ಎಗಳು ವಸೂಲಿ ಮಾಡುತ್ತಾರಲ್ಲ, ಅದೇ ರೀತಿ ತಂದುಕೊಡು, ನಾನೂ ಪಡಿತರ ಕಳುಹಿಸುತ್ತೇನೆ..’ ಎಂದು ಆಡಿಯೋದಲ್ಲಿ ಪಡಿತರ ಕೇಳಿದ್ದಕ್ಕೆ ಶಾಸಕರು ಉತ್ತರಿಸಿದ್ದಾರೆ. ಈ ಆಡಿಯೋ ತನ್ನದೆಂದು ಒಪ್ಪಿಕೊಂಡಿದ್ದು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ‘ಈಟಿವಿ ಭಾರತ್ ‘ ಗೆ ಸ್ಪಷ್ಟನೆ ನೀಡಿರುವ ತಿಪಟೂರು ಶಾಸಕ ಬಿ.ಸಿ. ನಾಗೇಶ್, ಉಮಾಶಂಕರ್ ಎಂಬ ಯುವಕ ನನ್ನ ಬಳಿ ಬಂದು ತಾಲೂಕಿನ ಎಲ್ಲಾ ಮನೆಗೂ ಪಡಿತರ ಹಂಚಬೇಕು ಎಂದಿದ್ದರು. ಅದಕ್ಕೆ ನನಗೆ ಅದೆಲ್ಲಾ ಆಗಲ್ಲಪ್ಪ. ನಾನೇನು ಕಮಿಷನ್ ತೆಗೆದುಕೊಳ್ಳೋ ಶಾಸಕ ಅಲ್ಲ ಎಂದಿದ್ದೆ. ಪ್ರಾಮಾಣಿಕವಾಗಿರೋ ಶಾಸಕರು, ಕಳ್ಳರಾಗಬೇಕಾ ಎಂದಿದ್ದೆ.
ಉಮಾಶಂಕರ್ ಬಿಜೆಪಿ ಕಾರ್ಯಕರ್ತನಾಗಿದ್ದ. ಅಲ್ಲದೆ ಗ್ರಾಮ ಪಂಚಾಯಿತಿ ಸದಸ್ಯ ಆಗಬೇಕು ಎಂಬ ಆಸೆ ಹೊಂದಿದ್ದಾನೆ. ಯಾರದ್ದೋ ಕುಮ್ಮಕ್ಕಿನಿಂದ ಇಂತಹ ಅವಾಂತರ ಸೃಷ್ಟಿಸುತ್ತಿದ್ದಾನೆ. ತಿಪಟೂರು ತಾಲೂಕಿನ ಪ್ರತಿ ಮನೆಗೂ ಪಡಿತರ ಹಂಚಲು 3 ರಿಂದ 4 ಕೋಟಿ ಹಣ ತರುವುದಕ್ಕೆ ಆಗಲ್ಲ. ಅಲ್ಲದೆ ತೀರ ಕಡುಬಡವರಿಗೆ ನಿರ್ಗತಿಕರಿಗೆ ಪಡಿತರವನ್ನು ಹಂಚಿದ್ದೇನೆ. ಅಲ್ಲದೆ ರೇಷನ್ ಕಾರ್ಡ್ ಇಲ್ಲದ ಮನೆಗಳಿಗೂ ಪಡಿತರವನ್ನು ಸರಕಾರದಿಂದ ನೀಡಲಾಗಿದೆ ಎಂದಿದ್ಧಾರೆ.