ತೂಮಕೂರ : ವಿದ್ಯಾರ್ಥಿಗಳು ಯಾವ ವಿಷಯವನ್ನಾದರೂ ಓದಲಿ. ಅದರಿಂದ ಶಿಕ್ಷಣದ ಪ್ರಮಾಣಪತ್ರ ಪಡೆಯಬಹುದೇ ಹೊರತು ಜ್ಞಾನವಲ್ಲ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಆಲೋಚನಾ ಮಟ್ಟವನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಮುಂದಾಗಬೇಕಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ. ವಿ.ಎಸ್ ರಾಮಮೂರ್ತಿ ಹೇಳಿದರು.
ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರಮಟ್ಟದ ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಲು 'ಟೆಕ್ನಿಷಿಯನ್ 2019' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಂತ್ರಜ್ಞಾನ ಎಂಬುದು ಕೆಲವು ವರ್ಷಗಳ ಹಿಂದೆ ರೂಪುಗೊಂಡಿದ್ದಲ್ಲ. ನೂರಾರು ವರ್ಷಗಳ ಕಾಲದಿಂದ ಸಾವಿರಾರು ವಿಜ್ಞಾನಿಗಳ ಅನೇಕ ಸಂಶೋಧನೆಗಳಿಂದ ಇಂದು ತಂತ್ರಜ್ಞಾನ ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಿದೆ.ಇಂದು ಶಿಕ್ಷಣ ಮತ್ತು ಉದ್ಯೋಗ ಪ್ರತಿಯೊಬ್ಬರಿಗೂ ಅವಶ್ಯಕವಾಗಿರಬೇಕು.
ಇಂದು ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ.ನಾವು ಕುಳಿತ ಸ್ಥಳದಲ್ಲಿಯೇ ಮೊಬೈಲ್ನಲ್ಲಿ ಎಲ್ಲಾ ಮಾಹಿತಿ ಪಡೆದುಕೊಳ್ಳಬಹುದಾಗಿದ್ದು, ತಂತ್ರಜ್ಞಾನ ಅಷ್ಟರಮಟ್ಟಿಗೆ ಮುಂದುವರೆದಿದೆ.ನಮ್ಮಲ್ಲಿ ಪ್ರತಿಯೊಂದು ಕಾರ್ಯ ಮಾಡಬೇಕಾದರೆ ಶ್ರದ್ಧೆ ಮತ್ತು ಆಸಕ್ತಿ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ.ಮೊದಲು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದು ನಾವು ಏನು ಕಲಿತಿದ್ದೇವೆ? ಅದರಿಂದ ಏನು ಪ್ರಯೋಜನ ಎಂಬುದನ್ನು ಅರಿತುಕೊಳ್ಳುತ್ತಾ ಹೋದಂತೆಲ್ಲ ದಿನೇ ದಿನೇ ನಮ್ಮ ಜ್ಞಾನದ ಮಟ್ಟ ಬೆಳೆಯುತ್ತದೆ. ಇದರಿಂದ ನಾವು ಸಾಧನೆಯ ಹಾದಿಯನ್ನು ಹೊಂದಬಹುದು ಎಂದರು.
ಮೊದಲು ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಚಿಂತನೆಯನ್ನು ನಮ್ಮಿಂದ ಹೊರ ಹಾಕಿ, ಪ್ರಯತ್ನ ಮಾಡಬೇಕು. ಆ ಪ್ರಯತ್ನವೇ ನಮ್ಮ ಮೊದಲ ಯಶಸ್ಸು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದರು.