ತುಮಕೂರು: ಕಾಯಿಲೆಗಳ ವಿರುದ್ಧ ಹೋರಾಡಲು ಮನುಷ್ಯ ಆರೋಗ್ಯವಾಗಿರಬೇಕಾದದ್ದು ಬಹಳ ಮುಖ್ಯ. ಪ್ರಸ್ತುತ ಕೊರೊನಾದಿಂದ ಕಂಗಾಲಾಗಿರುವ ಜನರು, ತಮ್ಮ ದೇಹದಲ್ಲಿ ರೋಗಾಣುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗಮನ ಹರಿಸುತ್ತಿದ್ದಾರೆ.
ಹಾಗಾಗಿ, ಜನರೀಗ ಹೆಚ್ಚಾಗಿ ಔಷಧಿ ಅಂಗಡಿಗಳಲ್ಲಿ ಸಿಗುವ ವಿಟಮಿನ್ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ವಿಟಮಿನ್ ಮಾತ್ರೆಗಳ ವಹಿವಾಟು ದೇಶದಲ್ಲಿ ಬಿರುಸಿನಿಂದ ಸಾಗಿದೆ.
ಕೊರೊನಾ ಸೋಂಕಿನಿಂದ ಪಾರಾಗಲು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ವಿಟಮಿನ್ ಬಿ ಕಾಂಪ್ಲೆಕ್ಸ್ ಮಾತ್ರೆಗಳನ್ನು ಬಳಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಅಲ್ಲದೆ ವಿಟಮಿನ್ ಸಿ ಮತ್ತು ಡಿ ಮಾತ್ರಗಳನ್ನು ಬಳಸಲು ಸೂಚಿಸುತ್ತಿದ್ದಾರೆ. ಸಾಮಾನ್ಯವಾಗಿ ಜನರು ಬಿಸಿಲಿನಲ್ಲಿ ಓಡಾಡುವುದರಿಂದ ವಿಟಮಿನ್ ಡಿ ಮಾತ್ರೆಗಳನ್ನು ಹೆಚ್ಚಾಗಿ ಬಳಸಲು ತಿಳಿಸುತ್ತಿಲ್ಲ. ಆದರೆ ಮೂಳೆ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಮಾತ್ರ ವಿಟಮಿನ್ ಡಿ ಮಾತ್ರೆಗಳನ್ನು ಪ್ರಸ್ತುತ ಕೊರೊನಾ ಬಿಕ್ಕಟ್ಟಿನ ನಡುವೆ ಬಳಸಲು ಸೂಚಿಸುತ್ತಿದ್ದಾರೆ.
ವಿಟಮಿನ್ ಬಿ, ಸಿ ಮತ್ತು ಡಿ ಮಾತ್ರೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡರೆ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ. ಈ ಮೂರು ವಿಟಮಿನ್ ಮಾತ್ರೆಗಳು ಮನುಷ್ಯನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಮಾತ್ರ ಉಳಿದು, ಇನ್ನುಳಿದವು ಮಲ,ಮೂತ್ರ ವಿಸರ್ಜನೆ ವೇಳೆ ದೇಹದಿಂದ ಹೊರಹೋಗುತ್ತದೆ. ಆದರೆ ವಿಟಮಿನ್ ಎ ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟ ಬುತ್ತಿ.
ಕೊರೊನಾ ವೈರಸ್ ಸೋಂಕಿತ ರೋಗಿಗಳು ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಂತಹ ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ ಅವರಿಗೆ ವಿಟಮಿನ್ ಬಿ ಕಾಂಪ್ಲೆಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಅಲ್ಲದೆ ವಿಟಮಿನ್ ಸಿ ಮಾತ್ರೆಗಳನ್ನು ಹೆಚ್ಚಾಗಿ ಬಳಸುವಂತೆ ತಿಳಿಸಲಾಗುತ್ತಿದೆ. ಹೀಗಾಗಿ ವಿಟಮಿನ್ ಮಾತ್ರೆಗಳನ್ನು ಬಳಸುವಂತೆ ವೈದ್ಯರು ಜನರಿಗೆ ಸಲಹೆ ನೀಡುತ್ತಿರುವುದರಿಂದ ಹೀಗಾಗಿ ಮಾರುಕಟ್ಟೆಯಲ್ಲಿ ಈ ಮಾತ್ರೆಗಳು ವ್ಯಾಪಾರ ಭರ್ಜರಿಯಾಗಿ ನಡೆದಿದೆ.
ಜಿಂಕ್ ಮತ್ತು ವಿಟಮಿನ್-ಸಿ ಮಿಶ್ರಿತ ಮಾತ್ರೆಗಳು ಮಾರುಕಟ್ಟೆಯಲ್ಲಿ ಬಹುಬೇಡಿಕೆಯುಳ್ಳದ್ದಾಗಿವೆ. ಜನರು ತಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಈ ರೀತಿಯ ವಿಟಮಿನ್ ದೊರೆಯದಿದ್ರೆ, ಇಂತಹ ಮಾತ್ರೆಗಳನ್ನು ಖರೀದಿಸುತ್ತಿದ್ದಾರೆ. ಎರಡು ತಿಂಗಳಿಂದ ಈಚೆಗೆ ಮಾರುಕಟ್ಟೆಯಲ್ಲಿ ಜನರು ಈ ಮಾತ್ರೆಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.