ತುಮಕೂರು: ಎರಡು ದಿನಗಳ ಹಿಂದೆ ಕೊರಟಗೆರೆಯಲ್ಲಿ ಬಿಜೆಪಿಯು ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದ ಭಾಷಣವನ್ನು ತಿರುಚಲಾಗಿದೆ. ಕೆಪಿಸಿಸಿ ಮಾಜಿ ಅಧ್ಯಕ್ಷ, ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಅವರನ್ನು ಮುಂದಿನ ಚುನಾವಣಿಯಲ್ಲಿ ಗೆಲ್ಲಿಸಿ ಎಂಬುದಾಗಿ ಸಿಎಂ ಹೇಳಿದ್ದಾರೆಂಬ ರೀತಿ ವಿಡಿಯೊ ತಿದ್ದಿ ವೈರಲ್ ಮಾಡಿರುವ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಎಂ ಭಾಷಣದ ವಿಡಿಯೊ ತಿರುಚಿದ್ದ ಕಿಡಿಗೇಡಿಗಳ ವಿರುದ್ಧ ಕೊರಟಗೆರೆ ಬಿಜೆಪಿ ಮಂಡಲದ ಅಧ್ಯಕ್ಷ ಪವನ್ ಕುಮಾರ್ ಪೊಲೀಸರಿಗೆ ದೂರು ನೀಡಿ,ಬಂಧನಕ್ಕೆ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಸೇವಾ ಬಳಗ ಎಂಬ ವಾಟ್ಸ್‌ಆ್ಯಪ್ ರೂಪ ಹಾಗೂ ಡಾ.ಜಿ ಪರಮೇಶ್ವರ್ ಕೊರಟಗೆರೆ ಎಂಬ ಫೇಸ್‌ಬುಕ್ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದೆ. ಇದೀಗ ಸಖತ್ ವೈರಲ್ ಆಗಿದೆ. ಕೊರಟಗೆರೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದಿದ್ದ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದರು.
ಈ ವೇಳೆ, ಮಾಜಿ ಡಿಸಿಎಂ ಪರಮೇಶ್ವರ್ ಅವರನ್ನು ಕಾಂಗ್ರೆಸ್‌ನವರು ಸೊಲಿಸುತ್ತಾರೆಂದು ಹೇಳಿಕೆ ನೀಡಿದ್ದರು. ಆ ವಿಡಿಯೊ ಇಟ್ಟುಕೊಂಡ ಕಿಡಿಗೇಡಿಗಳು, ಅದನ್ನು ತಿರುಚಿ ಪರಮೇಶ್ವರ್‌ಗೆ ಅತಿ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಬೇಕೆಂದು ಕರೆ ನೀಡಲು ಬಂದಿದ್ದೇನೆಂದು ಹೇಳಿರುವಂತೆ ಭಾಷಣ ಎಡಿಟ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂಓದಿ:ಜಾಗತಿಕ ಪತ್ರಿಕೆಗಳಲ್ಲಿ ಮೋದಿ ತವರು ಗುಜರಾತ್ನಲ್ಲಿ ಬಿಜೆಪಿ ಐತಿಹಾಸಿಕ ವಿಜಯದ ವರದಿ