ತುಮಕೂರು: ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಡೀ ದೇಶ ಒಪ್ಪಿದಂತಹ ವಿವಾದ ಇಲ್ಲದಂತಹ ವ್ಯಕ್ತಿ. ಹೀಗಾಗಿ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಮಾಜಿ ಸಚಿವ ಟಿ ಬಿ ಜಯಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿಯೂ ಕೂಡ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆನಂತರ ಬಂದಂತಹ ಸರ್ಕಾರಗಳು ಕೂಡ ಶಿಫಾರಸು ಮಾಡಿದ್ದವು ಎಂದರು. ಭಾರತರತ್ನ ಪ್ರಶಸ್ತಿಯನ್ನು ಕೊಡುವ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದು ಒಂದು ರೀತಿ ವಿವಾದಾತ್ಮಕವಾಗಿ ರೂಪುಗೊಂಡಿದೆ. ಅದನ್ನು ಚರ್ಚೆಗೆ ಬಿಟ್ಟು ರಾಜಕೀಯ ಲಾಭ ಪಡೆಯುವ ಪ್ರಯತ್ನ ಹುನ್ನಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಸುತ್ತಿನಲ್ಲಿ ಸುರಿದ ಮಳೆಯಿಂದ ಸಾಕಷ್ಟು ಅನಾಹುತಗಳು ಆಗಿವೆ. ಇದೀಗ ಮತ್ತೆ ಮಳೆ ಪ್ರಾರಂಭವಾಗಿದ್ದು, ಕಳೆದ ನಾಲ್ಕೈದು ತಿಂಗಳಿನಿಂದ ಉತ್ತರ ಕರ್ನಾಟಕ ಭಾಗದ ಜನರ ಸ್ಥಿತಿ ಹೇಳತೀರದಾಗಿದೆ. ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತಹ ಪ್ರಯತ್ನವನ್ನು ಯಾವ ಸಂಸದರೂ ಮಾಡುತ್ತಿಲ್ಲ. ಸಂಸದರ ಮತ್ತು ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಪ್ರಧಾನಿ ಬಳಿ ಹೋಗಲು ಹಿಂದೇಟು ಹಾಕುತ್ತಿರುವುದು ಸಾಕಷ್ಟು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸಹಾಯ ಮಾಡದಿದ್ದರೆ ಜನರ ಕಣ್ಣೀರು ತೊಳೆಯಲು ಸಾಧ್ಯವಿಲ್ಲ ಎಂದರು. ರಾಜ್ಯದ ಸಚಿವರು ಉಡಾಫೆಯ ಮಾತುಗಳಾಡುತ್ತಿದ್ದಾರೆ. ಇದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ತರುವ ಬಗ್ಗೆ ಮುಂದಾಗಬೇಕು ಎಂದಿದ್ದಾರೆ.