ತುಮಕೂರು: ಶಾಲೆಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿಗಳು ಸೇರಿದಂತೆ 17ಕ್ಕೂ ಅಧಿಕ ಜನರ ಮೇಲೆ ಬೀದಿನಾಯಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ದಾಳಿಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ಎಸ್ ಬಡಾವಣೆಯಲ್ಲಿ ಓಡಾಡುತ್ತಿರುವ ನಾಯಿ ಎದುರಿಗೆ ಸಿಕ್ಕವರ ಮೇಲೆಲ್ಲ ಎರಗುತ್ತಿದೆ. ಸರ್ಕಾರಿ ಸ್ವತಂತ್ರ ಪಿಯು ಹಾಗೂ ಎಸ್‌ಎಂಎಸ್ ಪಿಯು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ನಾಯಿ ದಾಳಿ ಮಾಡಿದೆ. ಗಾಯಾಳುಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದರೆ, ತೀವ್ರವಾಗಿ ಗಾಯಗೊಂಡ ಸುಧೀಂದ್ರ ಹಾಗೂ ತೇಜಸ್ವಿನಿ ಎಂಬುವವರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಬಡಾವಣೆಯ ದಶರಥ ದೇವಾಲಯ ಆವರಣದಲ್ಲಿದ್ದ ಹುಚ್ಚುನಾಯಿ ಏಕಾಏಕಿ ಬಂದು ದಾರಿಯಲ್ಲಿ ಹೋಗುತ್ತಿದ್ದ ನನ್ನ ಎಡ ಮೊಣಕೈಗೆ ಕಚ್ಚಿತು. ಬಳಿಕ ತೊಡೆ, ಕಾಲುಗಳನ್ನು ಗಾಯಗೊಳಿಸಿತು. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದೆ ಎಂದು ದಾಳಿಗೊಳಗಾದ ಸುಧೀಂದ್ರ ಅವರು ತಿಳಿಸಿದರು.
ಇಷ್ಟೆಲ್ಲಾ ಪ್ರಮಾದವಾಗಿದ್ದರೂ ಪುರಸಭೆಯಿಂದ ಈ ಹುಚ್ಚುನಾಯಿ ಹಿಡಿಯುವ ಕಾರ್ಯ ಮಾತ್ರ ಆಗಿಲ್ಲ. ದೂರು ನೀಡಲು ಕರೆ ಮಾಡಿದರೂ, ಪುರಸಭೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ವಾಹನ ಡಿಕ್ಕಿಗೆ ಅರ್ಚಕ ಸಾವು: ಇನ್ನೊಂದೆಡೆ ಅಪರಿಚಿತ ವಾಹನ ಡಿಕ್ಕಿಯಾಗಿ ಅರ್ಚಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಬೆಳದರ ಬಳಿ ನಡೆದಿದೆ. ಮೃತಪಟ್ಟವರನ್ನು ಬಾಬು(50) ಎಂದು ಗುರುತಿಸಲಾಗಿದೆ.
ಬೆಳದರದಿಂದ ಹನುಮಂತಗಿರಿ ಗ್ರಾಮಕ್ಕೆ ನಡೆದುಕೊಂಡು ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಇದರಿಂದ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೂಲತಃ ಚಿತ್ರದುರ್ಗದವರಾದ ಬಾಬು ಅವರು ಅರ್ಚಕ ವೃತ್ತಿ ಮಾಡುತ್ತಿದ್ದರು. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.