ತುಮಕೂರು : ನಗರದ ಎಸ್‌ವಿಎಸ್ ಶಾಲೆಯಲ್ಲಿ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಬುರ್ಖಾ ತೆಗೆದು ಒಳಗೆ ಬರುವಂತೆ ಆಡಳಿತ ಮಂಡಳಿ ಸೂಚನೆ ನೀಡಿದ ಘಟನೆ ನಡೆದಿದೆ.
ಕೆಲವರು ಬುರ್ಖಾ ತೆಗೆಯಲು ಒಪ್ಪದೆ ಮನೆಗೆ ವಾಪಸ್ ಆದರೆ, ಇನ್ನೂ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿ ಒಳಗಡೆ ಹೋದರು. ಅಲ್ಲದೆ ಕೆಲವು ಬುರ್ಖಾ ಮತ್ತು ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಮನವೊಲಿಸಿ ಶಿಕ್ಷಕರು ಒಳಗಡೆ ಬರಮಾಡಿಕೊಂಡರು.
ಈ ಕುರಿತು ಶಾಲೆಯ ಪ್ರಾಂಶುಪಾಲರಾದ ಮಂಜುಳ ಸ್ಪಷ್ಟನೆ ನೀಡಿದ್ದು, ನಾವು ಕಾಲೇಜಿನ ಪ್ರವೇಶ ದ್ವಾರದಲ್ಲಿ ಕುಳಿತಿದ್ದೇವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಬುರ್ಕಾ ಧರಿಸಿ ಬರುತ್ತಾರ ಅಂತಾ ನೋಡುತ್ತಿದ್ದೇವೆ. ಯಾವುದೇ ಮಕ್ಕಳು ಹಿಜಾಬ್, ಬುರ್ಖಾ ಧರಿಸಿ ಬಂದಿರಲಿಲ್ಲ.
ಚೂಡಿದಾರ್ ವೇಲ್ ಧರಿಸಿ ಬಂದಿದ್ದರು. 5-6ನೇ ತರಗತಿ ಮಕ್ಕಳ ಪೋಷಕರು ಬುರ್ಖಾ ಧರಿಸಿ ಬಂದಿದ್ದರು. ಮಕ್ಕಳನ್ನ ಬಿಡಲು ಹಾಗೂ ಮಕ್ಕಳಿಗೆ ಲಂಚ್ ಬಾಕ್ಸ್ ನೀಡಲು ಬಂದಿದ್ದರು. ಅವರನ್ನು ಒಳಗೆ ಬಿಡದೇ ವಾಪಸ್ ಕಳಿಸಿದ್ದೇವೆ. ವಿದ್ಯಾರ್ಥಿಗಳು ಯಾರು ವಾಪಸ್ ಹೋಗಿಲ್ಲ, ಆ ರೀತಿ ಯಾವ ಘಟನೆ ನಡೆದಿಲ್ಲ ಎಂದರು.
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಬೆನ್ನಲ್ಲೇ, ಜಿಲ್ಲೆಯ ಶಾಲೆಗಳ ಸುತ್ತಮುತ್ತ 200 ಮೀಟರ್ 144 ಸೆಕ್ಷನ್ ಜಾರಿಮಾಡಲಾಗಿದೆ. ಶಾಲೆಯ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದು, ನಗರದ ಸೂಕ್ಷ್ಮ ಪ್ರದೇಶದಲ್ಲಿರುವ ಶಾಲೆಗಳ ಮುಂಭಾಗ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತುಮಕೂರಿನ ಟೌನ್ ಹಾಲ್ ಬಳಿಯಿರೋ ಎಂಪ್ರೆಸ್ ಕರ್ನಾಟಕ ಹೈಸ್ಕೂಲ್ ಬಳಿ ಪೊಲೀಸ್ ಭದ್ರತೆ ಹಾಕಲಾಗಿದೆ. ಒಂದು ಡಿಎಆರ್ ತುಕಡಿ, ಓರ್ವ ಸಿಪಿಐ ನೇತೃತ್ವದಲ್ಲಿ ಶಾಲೆ ಮುಂದೆ ಭದ್ರತೆ ಮಾಡಲಾಗಿದೆ. ಹೊರಗಿನಿಂದ ಬರುವವರ ಮೇಲೆ ನಿಗಾ ಇಟ್ಟಿರುವ ಪೊಲೀಸರು, ಎಸ್ಪಿ, ಡಿವೈಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿಂದ ಜಿಲ್ಲೆಯ ಹಲವು ಕಡೆ ಗಸ್ತು ತಿರುಗುತ್ತಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕೆ ಪರೀಕ್ಷೆ ಬಹಿಷ್ಕರಿಸಿದ 13 ವಿದ್ಯಾರ್ಥಿನಿಯರು