ತುಮಕೂರು: ಇಂಗ್ಲಿಷ್ ಓದಲು ಕಷ್ಟವಾಗುತ್ತೆ ಎಂದು ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನ ಊರ್ಡಿಗೆರೆ ಗ್ರಾಮದಲ್ಲಿ ನಡೆದಿದೆ. ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ ಬಾಲಕ 7ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.
ಇಂಗ್ಲಿಷ್ ಓದಲು ಕಷ್ಟವಾಗುತ್ತೆ, ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದ ವಿದ್ಯಾರ್ಥಿಗೆ ಧೈರ್ಯ ಹೇಳಿ ಶಾಲೆಗೆ ಹೋಗುವಂತೆ ಪೋಷಕರು ಹೇಳಿದ್ದರು. ಆದ್ರೆ ನಿನ್ನೆ ಶಾಲೆಗೆ ಹೋಗುವ ಮುನ್ನ ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದನು. ನಂತರ ಮನೆಯಲ್ಲಿಯೇ ಕುಸಿದುಬಿದ್ದ ಬಾಲಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತುಮಕೂರು ನಗರದ ಕೋತಿ ತೋಪು ಮೂಲದ ದಂಪತಿಯ ಮಗನಾಗಿದ್ದಾನೆ. ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿರುವ ಬಾಲಕನ ತಂದೆ, ಕೂಲಿ ಕೆಲಸ ನಿಮಿತ್ತ ಊರ್ಡಿಗೆರೆ ಗ್ರಾಮಕ್ಕೆ ವಲಸೆ ಬಂದಿದ್ದ ಕುಟುಂಬವಾಗಿದೆ. ಬಾಲಕನ ಆತ್ಮಹತ್ಯೆ ಯತ್ನ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ತುಮಕೂರು ಬಿಇಒ ಹನುಮನಾಯಕ್ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಕೆಸಿಆರ್ ಭೇಟಿ: ದೇವೇಗೌಡರ ನಿವಾಸದಲ್ಲಿ ಬಿರಿಯಾನಿ, ನಾಟಿ ಕೋಳಿ ಸಾರಿನ ಘಮಲು