ತುಮಕೂರು: ಹೋಮ್ವರ್ಕ್ ಮಾಡಿಲ್ಲ ಹಾಗೂ ಗಣಿತ ವಿಷಯದಲ್ಲಿ ಪರಿಜ್ಞಾನವಿಲ್ಲ ಎಂದು ಸರ್ಕಾರಿ ಶಿಕ್ಷಕ ವಿದ್ಯಾರ್ಥಿನಿಗೆ ಮನಬಂದಂತೆ ಥಳಿಸಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿ ಹೇಳಿಕೆ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ವಾಜರಹಳ್ಳಿ ಸರ್ಕಾರಿ ಶಾಲೆಯಲ್ಲಿ (Vajrahalli Government School) ನಡೆದಿದ್ದು, ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ನಿಂತು ಶಿಕ್ಷಕನ ದುರ್ವರ್ತನೆ ಬಗ್ಗೆ ಮಾಹಿತಿ ನೀಡಿದ್ದಾಳೆ.
ಯಾವುದೇ ಅರಿವು ನಿನಗಿಲ್ಲ, ನಿನ್ನ ತಂದೆ ಶಾಲೆಗೆ ಬಂದು ವಿಚಾರಿಸುವುದಿಲ್ಲ ಎಂದು ಸಿಟ್ಟಿಗೆದ್ದ ರವಿ ಎಂಬ ಶಿಕ್ಷಕ ನಿಂದಿಸಿ ಹೊಡೆದಿದ್ದಾರೆ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.
ಘಟನೆ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (Department of Public Education Deputy Director) ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, 'ಶಿಕ್ಷಕರನ್ನು ಈ ಕುರಿತಂತೆ ವಿಚಾರಣೆ ಒಳಪಡಿಸುತ್ತೇವೆ. ಕೊರೊನಾ ನಂತರ ವಿದ್ಯಾರ್ಥಿಗಳು ಶಾಲೆಗೆ ಬರುವುದು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಈ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಶಿಕ್ಷಕ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸುತ್ತೇವೆ' ಎಂದು ಹೇಳಿದ್ದಾರೆ.