ತುಮಕೂರು: ಲಾಕ್ಡೌನ್ ಸಡಿಲಿಕೆ ನಂತರ ಬೀದಿಬದಿ ವ್ಯಾಪಾರಸ್ಥರು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ತುಮಕೂರು ನಗರದ ಬೀದಿ ಬದಿ ವ್ಯಾಪಾರಸ್ಥರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದಾರೆ.
ಹೌದು... ತುಮಕೂರು ನಗರದಲ್ಲಿ ಬೀದಿಬದಿಯಲ್ಲಿ ವಹಿವಾಟು ನಡೆಸುವ ಅದ್ರಲ್ಲೂ ಮುಖ್ಯವಾಗಿ ತಿಂಡಿ-ತಿನಿಸು ಮಾರಾಟ ಮಾಡುವ ವ್ಯಾಪಾರಸ್ಥರು ಲಾಕ್ ಡೌನ್ ಸಡಿಲಿಕೆ ನಂತರ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಹಂತ-ಹಂತವಾಗಿ ಗ್ರಾಹಕರು ತಿಂಡಿ-ತಿನಿಸುಗಳನ್ನು ತಿನ್ನಲು ಬೀದಿ ಬದಿ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ. ಅದಕ್ಕೆ ಕಾರಣ ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯಲು ಅನುಸರಿಸುತ್ತಿರುವ ಮುಂಜಾಗ್ರತಾ ಕ್ರಮಗಳು, ಭಿನ್ನ ಹೆಜ್ಜೆಗಳು.
ಲಾಕ್ಡೌನ್ ವೇಳೆ ಬೀದಿ ಬದಿ ಕೊಂಡು ತಿನ್ನುವವರ ಸಂಖ್ಯೆ ತೀರಾ ಕ್ಷೀಣಿಸಿತ್ತು. ಆದರೆ ಸದ್ಯ ಶೇಕಡಾ 60 ರಷ್ಟು ಗ್ರಾಹಕರು ಬೀದಿ ಬದಿ ವ್ಯಾಪಾರಸ್ಥರ ಬಳಿ ತಿಂಡಿ ತಿನಿಸು ಖರೀದಿಸಿ ತಿನ್ನುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಇನ್ನೂ ಕೆಲ ಜನರಲ್ಲಿ ಕೊರೊನಾ ಸೋಂಕಿನ ಅವ್ಯಕ್ತ ಭಯ ಮನೆಮಾಡಿದೆ. ಹೀಗಾಗಿ ಅವರು ಭಯ ಮುಕ್ತರಾಗಿ ಬೀದಿಬದಿ ಅಂಗಡಿಗಳಲ್ಲಿ ತಿಂಡಿತಿನಿಸುಗಳನ್ನು ತಿನ್ನಲು ಬರುತ್ತಿಲ್ಲ.
ಈಗಾಗಲೇ ತುಮಕೂರು ಮಹಾನಗರ ಪಾಲಿಕೆ ಸೂಚನೆ ಪ್ರಕಾರ ಬೀದಿಬದಿ ವ್ಯಾಪಾರಸ್ಥರು ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೆ ಗ್ರಾಹಕರು ಸಹ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಿಂಡಿ-ತಿನಿಸುಗಳನ್ನು ತಿನ್ನುವುದು, ಖರೀದಿಸುವುದು ಮಾಡುತ್ತಿದ್ದಾರೆ.
ಇನ್ನೂ ಲಾಕ್ಡೌನ್ ಸಂದರ್ಭದಲ್ಲಿ ಸರಿಸುಮಾರು ಮೂರು ತಿಂಗಳು ಸಂಪೂರ್ಣ ವ್ಯಾಪಾರ-ವಹಿವಾಟು ಇಲ್ಲದೆ ಕಂಗಾಲಾಗಿದ್ದ ಬೀದಿಬದಿ ವ್ಯಾಪಾರಿಗಳಿಗೆ ಜನಪ್ರತಿನಿಧಿಗಳು ಹಾಗೂ ದಾನಿಗಳು ನೀಡಿದ ದವಸಧಾನ್ಯಗಳು ಸಹಾಯವಾಗಿದೆ. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬೀದಿಬದಿ ವ್ಯಾಪಾರಸ್ಥರು ತಮ್ಮ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂದಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ.