ತುಮಕೂರು : ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತಂದು, ಅವರ ಭವಿಷ್ಯದ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಪ್ರಧಾನಮಂತ್ರಿ 15 ಅಂಶಗಳ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಸಿ, ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು, ವಿಶೇಷ ದಾಖಲಾತಿ ಆಂದೋಲನ ಮಾಡಬೇಕಿದೆ. ಈ ಮೂಲಕ ಶಾಲೆಯಿಂದ ವಿಮುಖರಾದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿಬೇಕು. ಜೊತೆಗೆ ಪ್ರತಿಯೊಂದು ಶಾಲೆಗೂ ಶೌಚಾಲಯ ವ್ಯವಸ್ಥೆ, ಕಾಂಪೌಂಡ್ ನಿರ್ಮಾಣ, ಗ್ರಂಥಾಲಯ ಕಟ್ಟಡದ ಕೆಲಸಗಳು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಸರ್ಕಾರ ನಿಮಗೆ ಎಲ್ಲಾ ರೀತಿಯ ಅಧಿಕಾರಗಳನ್ನು ನೀಡಿದೆ, ಆದರೆ ನೀವು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಈ ಮೂಲಕ ಅವುಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವಂತೆ ಮಾಡುವುದು ನಿಮ್ಮ ಜವಾಬ್ದಾರಿ. ಆಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.