ತುಮಕೂರು: ತುಮಕೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಹಾಗೂ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಲಾಗಿದೆ ಎಂದು ಆರೋಪಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನನಗೆ ಟಿಕೆಟ್ ಕೈ ತಪ್ಪಲು ನಾಲ್ಕು ಜನ ಕಾರಣರಾಗಿದ್ದು, ಅದರಲ್ಲಿ ಸಂಸದ ಜಿ ಎಸ್ ಬಸವರಾಜ್, ಶಾಸಕ ಜ್ಯೋತಿ ಗಣೇಶ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಳ್ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಅದ್ರಲ್ಲಿ ಪ್ರಮುಖರಾಗಿದ್ದಾರೆ ಎಂದು ಆರೋಪಿಸಿದರು.
ನಾನು ಬದುಕಿರೊವರೆಗೂ ಕಾಂಗ್ರೆಸ್ಗೆ ಹೋಗಲ್ಲ. ಮಾಜಿ ಪ್ರಧಾನಿ ದೇವೇಗೌಡರು ಹಿರಿಯರಿದ್ದಾರೆ, ನಾವು ಅವರ ಜೂನಿಯರ್. ಅವರ ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಇದೆ. ನಮ್ಮ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಇ-ಮೇಲ್ ಮುಖಾಂತರ ರಾಜೀನಾಮೆ ಪತ್ರ ರವಾನೆ ಮಾಡಿರುವುದಾಗಿ ಅವರು ಹೇಳಿದರು.
ಟಿಕೆಟ್ ಕೈ ತಪ್ಪಿದಕ್ಕೆ ಕಾರ್ಯಕರ್ತರ ಸಭೆ ಕರೆದಿದ್ದೆ. ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ನೂರಾರು ಕಾರ್ಯಕರ್ತರು, ಸಭೆ ತೀರ್ಮಾನಕ್ಕೆ ನಾನು ಬದ್ಧಎಂದು ರಿಸೈನ್ ಮಾಡಿದ್ದಾರೆ. ಈ ಬಾರಿ ನನ್ನ ಸ್ಪರ್ಧೆ ಬಹುತೇಕ ಖಚಿತ. ನನಗೆ ಬಹಳ ಪಕ್ಷಗಳಿಂದ ಆಫರ್ ಬಂದಿದೆ. ಕಾರ್ಯಕರ್ತರ ಜೊತೆ ಮಾತಾನಾಡಿ ತೀರ್ಮಾನ ಮಾಡುವೆ ಎಂದು ಶಿವಣ್ಣ ತಿಳಿಸಿದರು.
ತುಮಕೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ: ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಹಾಲಿ ಶಾಸಕ ಜ್ಯೋತಿ ಗಣೇಶ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಹಾಲಿ ಶಾಸಕ ಜ್ಯೋತಿ ಗಣೇಶ್ಗೆ ಹೈಕಮಾಂಡ್ ಟಿಕೆಟ್ ನೀಡಿ ಮಣೆ ಹಾಕಿದೆ. ತುರುವೇಕೆರೆ ವಿಧಾನಸಭೆ ಕ್ಷೇತ್ರಕ್ಕೆ ಹಾಲಿ ಶಾಸಕ ಮಸಾಲೆ ಜಯರಾಮ್ ಹೆಸರು ಘೋಷಣೆ ಮಾಡಿದರೇ, ಕುಣಿಗಲ್ ವಿಧಾನಸಭೆ ಕ್ಷೇತ್ರಕ್ಕೆ ಡಿ. ಕೃಷ್ಣಕುಮಾರ್, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಸುರೇಶಗೌಡ, ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಹಾಗೂ ಸಚಿವ ಬಿ. ಸಿ ನಾಗೇಶ್, ಕೊರಟಗೆರೆ ಕ್ಷೇತ್ರಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಕೃಷ್ಣನಾಯಕ್, ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ರಾಜೇಶ್ ಗೌಡ, ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಹಾಲಿ ಶಾಸಕ ಮತ್ತು ಸಚಿವ ಜೆ.ಸಿ ಮಾಧುಸ್ವಾಮಿ, ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ನಿವೃತ್ತ ಅಧಿಕಾರಿ ಎಲ್.ಸಿ ನಾಗರಾಜ್, ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಎಸ್ಡಿ ದಿಲೀಪ್ ಕುಮಾರ್ ಅವರ ಹೆಸರನ್ನು ಘೋಷಣೆ ಮಾಡಿದೆ. ಇನ್ನು, ಗುಬ್ಬಿ ಕ್ಷೇತ್ರಕ್ಕೆ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಅವರಿಗಾಗಿ ಟಿಕೆಟ್ನ ಬೇಡಿಕೆ ಇಡಲಾಗಿತ್ತು.
ಇದನ್ನೂ ಓದಿ: ಮೂಡಿಗೆರೆ ಟಿಕೆಟ್ ಮಿಸ್: ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿಗೂ ಗುಡ್ ಬೈ ಹೇಳಿದ ಎಂಪಿ ಕುಮಾರಸ್ವಾಮಿ