ತುಮಕೂರು: ಜಿಲ್ಲೆಯಲ್ಲಿ ನಡೆಯಬೇಕಿದ್ದ ಕಾಮಗಾರಿಗಳು ಕೆಲವು ವರ್ಷಗಳಿಂದ ನಡೆಯುತ್ತಿದ್ದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ತಡೆಯುಂಟಾಗಿದೆ. ಸುಮಾರು 60 ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಅದರಲ್ಲಿ ಸ್ಮಾರ್ಟ್ ಲೈಬ್ರರಿ, ಸ್ಮಾರ್ಟ್ ರೋಡ್, ರಿಂಗ್ ರೋಡ್, ವಿವಿಧ ಇಲಾಖೆಗಳ ಕಟ್ಟಡಗಳು, ಬಸ್ ನಿಲ್ದಾಣದ ಕಾಮಗಾರಿಗಳೂ ಸೇರಿವೆ.
ಸುಮಾರು 750 ಕೋಟಿ ರೂ. ಕಾಮಗಾರಿಗಳು ಇವಾಗಿದ್ದು, ಲಾಕ್ಡೌನ್ನಿಂದ ಈ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭೂಬಾಲನ್ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದ ಕಾಮಗಾರಿಗಳೂ ನಿಂತುಹೋಗಿವೆ.
ಜಿಲ್ಲೆಯ ಮೂಲಕ ಹಾದು ಹೋಗುತ್ತಿರುವ ಎತ್ತಿನಹೊಳೆ ಕಾಮಗಾರಿ ಯೋಜನೆ ಕೂಡ ಸ್ಥಗಿತಗೊಂಡಿದೆ. ಕೊರಟಗೆರೆ ಬಳಿ ನಡೆಯುತ್ತಿದ್ದ ಪೈಪ್ಲೈನ್ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿಲ್ಲ. ಬದಲಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಒಂದೆಡೆ ಕಾಲ ಕಳೆಯುತ್ತಿದ್ದಾರೆ.
ಇನ್ನು ಲಾಕ್ಡೌನ್ ವಿಷಯ ತಿಳಿಯುತ್ತಿದ್ದಂತೆ ಗುತ್ತಿಗೆದಾರರು ಬಹುತೇಕ ಎಲ್ಲ ಕಾರ್ಮಿಕರನ್ನು ಅವರವರ ಊರುಗಳಿಗೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಇನ್ನು ಕೆಲವರನ್ನು ಒಂದೆಡೆ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಗುತ್ತಿಗೆದಾರರು ಕೂಡ ವಾಪಸ್ ಹೊರಟು ಹೋಗಿದ್ದಾರೆ.