ತುಮಕೂರು : ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಹತ್ತನೇ ಪದವಿ ಪ್ರದಾನ ಸಮಾರಂಭ ಆಗಸ್ಟ್ 4ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಎಸ್ಐಟಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಮಠಾಧ್ಯಕ್ಷ ಹಾಗೂ ಎಸ್ಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೈಕ್ರೋ ಎಲೆಕ್ಟ್ರಾನಿಕ್ ಡಿವೈಸಸ್ ಅಂಡ್ ಕಂಪ್ಯುಟೇಷನ್ ಸಿಸ್ಟಮ್ನ ನಿರ್ದೇಶಕ ಡಾ. ಸುಧೀರ್ ಕಾಮತ್ ಘಟಿಕೋತ್ಸವ ಭಾಷಣ ಮಾಡಲಿದ್ದು, ಸಮಾರಂಭದಲ್ಲಿ ಬಟ್ಟು 75 ಎಂಬಿಎ, 64 ಎಂಸಿಎ, 81 ಎಂಟೆಕ್, 968 ಎಂಜಿನಿಯರಿಂಗ್ ಹಾಗೂ 60 ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಸಂಸ್ಥೆಯಿಂದ ಒಟ್ಟು 34 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಬಾರಿ ತುಮಕೂರಿನ ವಿದ್ಯಾರ್ಥಿ ಎಸ್.ವಿಶಾಲ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮೊದಲನೇಯ ರ್ಯಾಂಕ್ ಗಳಿಸುವ ಮೂಲಕ ಡಾ. ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಸೇರಿದಂತೆ ಒಟ್ಟು 7 ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ ವಿದ್ಯಾರ್ಥಿ ಎನಿಸಿದ್ದಾರೆ. ಇನ್ನು ಸಿವಿಲ್ ಎಂಜಿನಿಯರಿಂಗ್ನಲ್ಲಿ ಆರ್.ಕನ್ನಿಕಾ ಮೊದಲ ರ್ಯಾಂಕ್ ಪಡೆದು ಒಟ್ಟು ಆರು ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದರು.