ತುಮಕೂರು: ಕೆಲವು ತಾಂತ್ರಿಕ ತೊಂದರೆಗಳಿಂದ ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಯನ್ನು ಗಮನಿಸಿದ್ದು, ಶಿರಾ ಉಪಚುನಾವಣೆ ವೇಳೆ ಮುಖ್ಯಮಂತ್ರಿಗಳು ನೀಡಿರುವ ವಾಗ್ದಾನದಂತೆ ಈ ಬಾರಿ ಹೇಮಾವತಿ ನೀರು ಹರಿಸಲಾಗುವುದು ಎಂದು ಶಿರಾ ಶಾಸಕ ಡಾ.ರಾಜೇಶ್ ಗೌಡ ತಿಳಿಸಿದ್ದಾರೆ.
ಶಿರಾದಲ್ಲಿ ಮಾತನಾಡಿದ ಅವರು, ನೀರು ಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅಲ್ಲದೆ, ಒಮ್ಮೆ ಮಾತು ಕೊಟ್ಟರೆ ಅದನ್ನು ಅನುಷ್ಠಾನಕ್ಕೆ ತರುವಂತಹ ಬದ್ಧತೆ ಬಿಜೆಪಿ ಪಕ್ಷದ್ದಾಗಿದೆ. ಹಾಗಾಗಿ, ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು ಎಂದು ಹೇಳಿದರು.
ಶಿರಾದ ಕಳ್ಳಂಬೆಳ್ಳ ಕೆರೆಗೆ ಮಾತ್ರ ಹೇಮಾವತಿ ನೀರು ಹರಿಸಲಾಗುವುದು ಎಂದು ತಾಂತ್ರಿಕವಾದ ಹೇಳಿಕೆಯನ್ನು ಸಚಿವ ಮಾಧುಸ್ವಾಮಿ ನೀಡಿದ್ದಾರೆ. ಆದರೆ ಕಳೆದ ಬಾರಿಯಂತೆ ಹೆಚ್ಚುವರಿ ನೀರನ್ನು ಹೇಮಾವತಿ ಜಲಾಶಯದಿಂದ ಹರಿಸಲಾಗುವುದು. ಮಳೆಯಾಗಿ ಬಹುತೇಕ ಜಲಾಶಯಗಳು ತುಂಬಿವೆ. ಹಾಗಾಗಿ, ನೀರು ಹರಿಸುವುದು ನಿಶ್ಚಿತ ಎಂದು ತಿಳಿಸಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳ: ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ
ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಜೈಲಿಗೆ ಹೋಗುವಂತಹ ಸಂದರ್ಭ ಬಂದರೆ ನಾನೇ ಮೊದಲಿಗನಾಗುತ್ತೇನೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಬಿ.ವೈ ವಿಜಯೇಂದ್ರ ಅವರ ಮನೆಯಲ್ಲಿ ನಡೆದ ಮಾತುಕತೆಯಲ್ಲಿ, ಖುದ್ದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಮದಲೂರು ಕೆರೆಗೆ ನೀರು ಹರಿಸುವುದು ಸರ್ಕಾರ ಹಾಗೂ ಪಕ್ಷದ ಬದ್ಧತೆಯಾಗಿದೆ ಎಂದಿದ್ದಾರೆ ಎಂದು ತಿಳಿಸಿದರು.