ತುಮಕೂರು: ಜಿಲ್ಲೆಯ ಶಿರಾ ಪುರಸಭೆಯ ವಾರ್ಡ್ 9ರ ಜೆಡಿಎಸ್‌ನ ಸದಸ್ಯ ಕೆ.ರವಿಶಂಕರ್ ಆಯ್ಕೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅನೂರ್ಜಿತಗೊಳಿಸಿ ಆದೇಶಿಸಿದೆ.
2021ರ ಡಿಸೆಂಬರ್ 30ರಂದು ನಡೆದ ಶಿರಾ ಪುರಸಭೆ ಚುನಾವಣೆಯಲ್ಲಿ ರವಿಶಂಕರ್ ಆಯ್ಕೆಯಾಗಿದ್ದರು. ಆದರೆ, ಅವರು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಂಶವನ್ನು ಚುನಾವಣಾ ಅಫಿಡವಿಟ್‌ನಲ್ಲಿ ಮರೆ ಮಾಚಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ಗೆ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿ ಎಂ.ಕೃಷ್ಣಪ್ಪ ಅರ್ಜಿ ಸಲ್ಲಿಸಿದ್ದರು.
ಅಲ್ಲದೇ, ಸುಮಾರು 37.46 ಲಕ್ಷ ರೂ. ಮೌಲ್ಯದ 499.5 ಕೆಜಿ ಬೆಳ್ಳಿ ಮತ್ತು 7.53 ಲಕ್ಷ ರೂ.ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 3.6 ಲಕ್ಷ ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ಪಡೆಯುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದರು. ಆದಾಗ್ಯೂ, ಅವರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಕಾರ್ಡ್ ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದರು.
ಈ ಅರ್ಜಿಯನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಜಿ. ಅವರು ವಿಚಾರಣೆ ನಡೆಸಿ ರವಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶ ನೀಡಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಕೆಯಾದ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಆರೋಪಿಯು ಸತ್ಯಗಳನ್ನು ಮುಚ್ಚಿಹಾಕಿದ್ದಾರೆ ಮತ್ತು ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಸಾಬೀತಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ:ಹೈಕೋರ್ಟ್ ಆದೇಶದನ್ವಯ ಎಸಿಬಿ ರದ್ದು ಮಾಡಿ ಸರ್ಕಾರ ಅಧಿಕೃತ ಆದೇಶ