ತುಮಕೂರು: ಚಲಿಸುತ್ತಿದ್ದ ಶಾಲಾ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕಿಡಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ ಹಿನ್ನೆಲೆ 12 ಶಾಲಾ ಮಕ್ಕಳ ಅಸ್ವಸ್ಥರಾಗಿರೋ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ನಗರದ ವಿದ್ಯಾ ಎಜುಕೇಷನ್ ಶಾಲೆಯ ವಾಹನದಲ್ಲಿ ಇಂದು ಬೆಳಗ್ಗೆ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. 8 ನೇ ತರಗತಿ ವಿದ್ಯಾರ್ಥಿಯೊಬ್ಬ ವಾಹನದೊಳಗೆ ಕಾಣಿಸಿಕೊಂಡಿದ್ದ ವೈರ್ ಮುಟ್ಟಿದ್ದಾನೆ. ವಿದ್ಯುತ್ ಸ್ಪರ್ಶವಾದ ಹಿನ್ನೆಲೆ ಅಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣ ಚಾಲಕ ವಾಹನ ನಿಲ್ಲಿಸಿದ್ದಾನೆ. ಅಲ್ಲದೆ ವಿದ್ಯುತ್ ಕಿಡಿ ಕಾಣಿಸಿಕೊಂಡು ಸುಟ್ಟ ವಾಸನೆಯಿಂದ ವಾಹನದ ತುಂಬೆಲ್ಲಾ ಹೊಗೆ ತುಂಬಿಕೊಂಡಿದೆ. ಕುಡಲೇ ಮಕ್ಕಳನ್ನೆಲ್ಲಾ ವಾಹನದಿಂದ ಕೆಳಗಿಳಿಸಲಾಗಿದೆ.
ಆಗ ವಾಹನದಲ್ಲಿದ್ದ 22 ಮಕ್ಕಳ ಪೈಕಿ 12 ಮಕ್ಕಳು ಅಸ್ವಸ್ಥರಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಪೋಷಕರಿಗೆ ಕರೆ ನೀಡಿ ವಿಷಯ ತಿಳಿಸಿದ್ದಾರೆ. ನಂತರ ಬೇರೊಂದು ವಾಹನದಲ್ಲಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಯಿತು.
ಅಸ್ವಸ್ಥಗೊಂಡಿದ್ದ 12 ಮಕ್ಕಳನ್ನು ನಗರದ ವಿನಾಯಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದಿನ ಅವಘಡಕ್ಕೆ ಶಾಲಾ ವಾಹನ ಸುಮಾರು 20 ವರ್ಷಗಳ ಹಳೆಯದಾಗಿರುವುದೇ ಕಾರಣ ಎಂಬುದು ಪೋಷಕರ ಆರೋಪವಾಗಿದೆ.