ತುಮಕೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಕೃತಿ ಆಧಾರಿತ 'ಮೂಕಜ್ಜಿಯ ಕನಸು' ಚಲನಚಿತ್ರವನ್ನು ನಗರದ ಗಾಯಿತ್ರಿ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು.
ಇಂದಿನಿಂದ ಒಂದು ವಾರಗಳ ಕಾಲ ಪ್ರತಿದಿನ ಬೆಳಗ್ಗೆ ಹತ್ತು ಮೂವತ್ತಕ್ಕೆ ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಮೂಕಜ್ಜಿಯ ಕನಸು ಚಲನಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕರಾದ ದಂಡಿನಶಿವರ ಪಿ. ಶೇಷಾದ್ರಿ ಅವರು ನಿರ್ದೇಶಿಸಿದ್ದು, ಗುಬ್ಬಿ ವೀರಣ್ಣನವರ ಮೊಮ್ಮಗಳಾದ ಡಾ. ಬಿ. ಜಯಶ್ರೀ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಭೂಮಿ ಬಳಗದ ಅಧ್ಯಕ್ಷ ವಿ. ಸೋಮಣ್ಣ ಮಾತನಾಡಿ, ಪಿ. ಶೇಷಾದ್ರಿ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಮೂಕಜ್ಜಿಯ ಕನಸು ಚಲನಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಇಂತಹ ಸಿನಿಮಾ ಕನ್ನಡ ಆಸಕ್ತರು, ಕನ್ನಡದ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆಯಾಗಿದೆ. ಇದನ್ನು ಪ್ರತಿಯೊಬ್ಬರೂ ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡರು.