ತುಮಕೂರು: ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ಒಮ್ಮೊಮ್ಮೆ ಗಾಬರಿ ಪಡುತ್ತಾರೆ. ಆದರೆ, ನಾವೆಲ್ಲರೂ ಇದ್ದೇವೆ ಎಂದು ಅವರಿಗೆ ಧೈರ್ಯ ಹೇಳುತ್ತೇನೆ ಅಂತ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹೇಳಿದರು.
ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಗನಹಳ್ಳಿ ಹಾಗೂ ಕಲ್ಕೆರೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಾನು ಈ ಸತತವಾಗಿ 8 ವರ್ಷಗಳ ಕಾಲ ಕುಳಿತು ನಿಭಾಯಿಸಿದ್ದೇನೆ, ಅದು ಅಷ್ಟು ಸುಲಭದ ಮಾತಲ್ಲ. ಕಾಂಗ್ರೆಸ್ ಪಕ್ಷ ಅಷ್ಟು ದೊಡ್ಡ ಜವಾಬ್ದಾರಿಯನ್ನು ನನ್ನ ಮೇಲೆ ನಂಬಿಕೆ ಇಟ್ಟು ನೀಡಿತ್ತು. ಇಡೀ ರಾಜ್ಯದಲ್ಲಿ ಪಕ್ಷದ ಆಗುಹೋಗುಗಳನ್ನು ನಿಭಾಯಿಸಲು ಡಿ ಕೆ ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮತದಾರರು ನನ್ನನ್ನು 2 ಬಾರಿ ಗೆಲ್ಲಿಸಿದ್ರು.. ಸಿಎಂ ಆಗಬೇಕು ಅನ್ನೋ ಟೈಮಲ್ಲಿ ಪಲ್ಟಿ ಹೊಡೆಸಿದ್ರು: ಜಿ ಪರಮೇಶ್ವರ್
ಇನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು 15 ವರ್ಷಗಳ ಕಾಲ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 20 ವರ್ಷಗಳ ಕಾಲ ಇದ್ದು ರಾಜಕೀಯ ಮಾಡಿದ್ದೇನೆ. ಇದೀಗ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕೆಲವರು ಮೀಸೆ ಬಿಟ್ಟುಕೊಂಡು, ಹುಲಿ ವೇಷ ಹಾಕಿಕೊಂಡು ಬರುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಎಂದು ಓಡಾಡುತ್ತಿರುವ ಅನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಎಲೆರಾಂಪುರದ ಕುಂಚಿಟಿಗರ ಶ್ರೀಮಠದ ಹನುಮಂತನಾಥ ಸ್ವಾಮೀಜಿ ಹಾಗೂ ಸಿದ್ದರಬೆಟ್ಟದ ಶಿವಾಚಾರ್ಯ ಶ್ರೀ ಸ್ವಾಮೀಜಿಗಳು ಉಪಸ್ಥಿತರಿದ್ದರು.