ತುಮಕೂರು: ಯಾವುದೇ ಒಂದು ಪ್ರದೇಶದ ರಸ್ತೆಯ ಸ್ಥಿತಿಗತಿಗಳು ಅಲ್ಲಿನ ಅಭಿವೃದ್ಧಿಯನ್ನು ಎತ್ತಿ ಹಿಡಿಯುತ್ತದೆ. ರಸ್ತೆ ಕಾಮಗಾರಿ ಮೇಲೆಯೇ ಅಲ್ಲಿನ ಅಭಿವೃದ್ಧಿಯನ್ನು ಅಳೆಯುವುದುಂಟು. ಆದ್ರೆ ಅದೆಷ್ಟೋ ಕಡೆಗಳಲ್ಲಿ ಕೆಲ ಮುಖ್ಯ ರಸ್ತೆಗಳನ್ನು ಮಾತ್ರ ಅಭಿವೃದ್ಧಿಪಡಿಸಲಾಗುತ್ತದೆಯೇ ಹೊರತು ಹೆಚ್ಚಿನ ರಸ್ತೆಗಳು ಅಭಿವೃದ್ಧಿ ಕಾಣುವುದೇ ಇಲ್ಲ. ಈ ಸಮಸ್ಯೆಯಿಂದ ತುಮಕೂರು ಕೂಡ ಹೊರತಲ್ಲ.
ಕರ್ನಾಟಕ ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮುಂಚೂಣಿ ರಾಜ್ಯ. ತನ್ನ ಅಭಿವೃದ್ಧಿ ಪಥದಲ್ಲಿ ರಸ್ತೆ ಮೂಲಸೌಕರ್ಯ ಪ್ರಮುಖ ಕೊಡುಗೆ ನೀಡಿದೆ. ಅದರಂತೆ ದೇಶದ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ತುಮಕೂರು ನಗರ ಕೂಡ ಒಳಪಟ್ಟಿದೆ. ಆದರೆ ತುಮಕೂರು ನಗರದಲ್ಲಿ ಸೀಮಿತ ರಸ್ತೆಗಳು ಮಾತ್ರ ಯೋಜನೆಯಡಿ ಅಭಿವೃದ್ಧಿ ಕಾಣುತ್ತಿವೆ ಹೊರತು ಕೆಲವು ರಸ್ತೆಗಳು ಇಂದಿಗೂ ಗುಂಡಿಗಳಿಂದ ಕೂಡಿವೆ.
ತುಮಕೂರು ಮಹಾನಗರ ಪಾಲಿಕೆ ಕೂಡ ಗುಂಡಿ ಬಿದ್ದ ರಸ್ತೆಗಳತ್ತ ಕಣ್ಣೆತ್ತಿ ನೋಡುತ್ತಿಲ್ಲ ಎನ್ನುವ ಆರೋಪವಿದೆ. ಇದರಿಂದಾಗಿ ಬಹುತೇಕ ಹದಗೆಟ್ಟ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲ ಬಡಾವಣೆಗಳ ಬಳಿ ಗುಂಡಿಗಳಿಂದ ಕೂಡಿರುವ ರಸ್ತೆಗಳಲ್ಲಿ ವಿಧಿಯಿಲ್ಲದೆ ಸಾರ್ವಜನಿಕರು ಸಂಚರಿಸುವ ವೇಳೆ ಕೆಲ ಸಣ್ಣ-ಪುಟ್ಟ ಅಪಘಾತಗಳಿಗೆ ಒಳಗಾಗಬೇಕಾಗಿದೆ. ರಾತ್ರಿಯಾಯಿತೆಂದರೆ ಸರಿಯಾದ ಬೀದಿ ದೀಪಗಳು ಕೂಡ ಇಲ್ಲದೆ ಇಂತಹ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಾಗುವ ಸಾರ್ವಜನಿಕರು ಸಾಕಷ್ಟು ಹರಸಾಹಸ ಪಡಬೇಕಾಗಿದೆ. ಇನ್ನೂ ಮಳೆಗಾಲ ಬಂದರೆ ಇಂತಹ ರಸ್ತೆಗಳಲ್ಲಿ ಹೆಚ್ಚು ಅಪಘಾತಕ್ಕೆ ಒಳಗಾಗಬೇಕಾಗುತ್ತದೆ.
ಶಾಸಕರ ಪ್ರತಿಕ್ರಿಯೆ
ತುಮಕೂರು ನಗರದಲ್ಲಿ 930 ಕಿಲೋ ಮೀಟರ್ ಉದ್ದದ ರಸ್ತೆ ಇದೆ. ಹೊಸದಾಗಿ ನಿರ್ಮಾಣವಾಗಿರುವ ಲೇಔಟ್ಗಳನ್ನು ಸೇರಿಸಿದರೆ ಸಾವಿರ ಕಿಲೋ ಮೀಟರ್ ಮೀರಿದ ರಸ್ತೆ ವ್ಯಾಪ್ತಿ ಇದೆ. ನಗರದಲ್ಲಿ ಶೇ.60ರಷ್ಟು ರಸ್ತೆಗಳು ಇನ್ನು ಕೂಡ ಮಣ್ಣಿನಿಂದ ಕೂಡಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೇವಲ ಆರು ವಾರ್ಡ್ಗಳ ರಸ್ತೆಗಳನ್ನು ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಇನ್ನುಳಿದಂತೆ ರಸ್ತೆಗಳ ಅಭಿವೃದ್ಧಿಗಾಗಿ ಶಾಸಕರ ಅನುದಾನ ಹಾಗೂ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅನುದಾನದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ತಿಳಿಸಿದ್ದಾರೆ.