ತುಮಕೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಸಮೀಪಿಸುತ್ತಿದೆ. ದಿನದ ಅವಧಿಯಲ್ಲಿ ನಿತ್ಯ ಉಪವಾಸ ವ್ರತ ಮಾಡಿ ರಾತ್ರಿ ನಮಾಜ್ ನಂತರ ವಿವಿಧ ರೀತಿಯ ಖಾದ್ಯ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ.
ತುಮಕೂರಿನಲ್ಲಿಯೂ ಕೂಡ ಅನೇಕ ಖಾದ್ಯಗಳು ಉಪವಾಸನಿರತರನ್ನು ಸೆಳೆಯುತ್ತಿವೆ. ಅದರಲ್ಲಿ ಮುಖ್ಯವಾಗಿ ಸಮೋಸ ಕೂಡ ಒಂದಾಗಿದೆ. ನಗರದ ಬಹುತೇಕ ಎಲ್ಲ ಮಸೀದಿಗಳ ಬಳಿ ಸಂಜೆಯಾಯಿತೆಂದರೆ ಸಮೋಸ ಪರಿಮಳ ಎಲ್ಲೆಡೆ ಪಸರಿಸುವುದು ಸಾಮಾನ್ಯವಾಗಿದೆ.
ರಂಜಾನ್ ಉಪವಾಸದ ವ್ರತವನ್ನು ಆಚರಿಸುವಂತಹ ಎಂಟು ವರ್ಷದ ಬಾಲಕನಿಂದ 80 ವರ್ಷದ ವೃದ್ಧರವರೆಗೂ ಸಂಜೆಯಾಯಿತೆಂದರೆ ಸಮೋಸವನ್ನು ಹುಡುಕಿಕೊಂಡು ಹೊರಡುತ್ತಾರೆ. ನಗರದಲ್ಲಿರುವ ಬಹುತೇಕ ಎಲ್ಲಾ ಮಸೀದಿಗಳ ಸಮೀಪ ಸಮೋಸ ಅಂಗಡಿಗಳು ತೆರೆದಿರುತ್ತವೆ. ಬಗೆ ಬಗೆಯ ಸಮೋಸಗಳನ್ನು ಮಾರಾಟಕ್ಕೆ ಇಡಲಾಗಿರುತ್ತದೆ. ಸ್ಥಳದಲ್ಲಿಯೇ ತಯಾರಿಸಿ ಮಾರಾಟ ಮಾಡುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಸವಿಯುತ್ತಾರೆ. ಅದರಲ್ಲಿ ತರಕಾರಿ ಸಮೋಸ, ಮೊಟ್ಟೆ ಸಮೋಸ, ಖೈಮಾ ಸಮೋಸ ಹೀಗೆ ಅನೇಕ ಬಗೆಯ ಸಮೋಸಗಳು ಬಿಕರಿಗೆ ಇರುತ್ತವೆ.
ಸಂಜೆ ಉಪವಾಸವನ್ನು ನೀರು ಅಥವಾ ಖರ್ಜೂರದ ಮೂಲಕ ಪೂರ್ಣಗೊಳಿಸಿ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ ಎಂಬ ಕಾರಣಕ್ಕೆ ತಕ್ಷಣ ಯಾವುದೇ ಸಿಹಿ ಪದಾರ್ಥ ಸೇವಿಸುವುದಿಲ್ಲ. ಬದಲಾಗಿ ಸಮೋಸವನ್ನು ಸೇವಿಸಲು ಮುಂದಾಗುತ್ತಾರೆ. ಸಮೋಸದಲ್ಲಿ ಮುಖ್ಯವಾಗಿ ತರಕಾರಿಯನ್ನ ಹೆಚ್ಚಾಗಿ ಬಳಸಲಾಗಿರುತ್ತದೆ. ಹೀಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯವಾಗಿರಬಹುದು. ರಂಜಾನ್ ಅವಧಿಯಲ್ಲಿ ಮಾತ್ರ ಈ ಸಮೋಸವನ್ನು ಹೆಚ್ಚು ಸೇವಿಸಲು ಇಷ್ಟಪಡುತ್ತೇವೆ ಎನ್ನುತ್ತಾರೆ ಸ್ಥಳೀಯರೊಬ್ಬರು.