ತುಮಕೂರು: ಕೇಂದ್ರ ಸರ್ಕಾರದ ವಿವಿಧ ನೀತಿಗಳನ್ನ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ ನಡೆಸಿತು.
ಲಾಕ್ಡೌನ್ ಕಾಲಾವಧಿಯ ಪೂರ್ವ ವೇತನ, ಕಾರ್ಪೊರೇಟ್ ಬಂಡವಾಳ ಕಾರ್ಮಿಕ ಕಾನೂನುಗಳು ತಿದ್ದುಪಡಿ ವಿರುದ್ಧ ಹಾಗೂ ಕಾರ್ಮಿಕ ಹಕ್ಕುಗಳ ರಕ್ಷಣೆ ಸೇರಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ, ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಗಳನ್ನು ಕಾಯಂಗೊಳಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ ಆರು ತಿಂಗಳು ಮಾಸಿಕ 7,500 ರೂಪಾಯಿಗಳ ನೇರ ನಗದು ವರ್ಗಾವಣೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವನ್ನ 200 ದಿನಗಳಿಗೆ ಹೆಚ್ಚಿಸಬೇಕು. ವಲಸೆ ಕಾರ್ಮಿಕರಿಗೆ ಹಾಗೂ ನಗರದ ಬಡವರಿಗೆ ಈ ಯೋಜನೆ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ, ಮಾತನಾಡಿದ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ಸೈಯದ್ ಮುಜೀಬ್, ಇಷ್ಟು ದಿನಗಳ ಕಾಲ ದೇಶದಲ್ಲಿ ಲಾಕ್ ಡೌನ್ ಮಾಡಿ ಸರ್ಕಾರ ಸಾಧಿಸಿದ್ದಾದರೂ ಏನು? ದಿನೇ ದಿನೆ ಕೋವಿಡ್-19 ರೋಗದ ಪ್ರಮಾಣ ಹೆಚ್ಚಾಗುತ್ತಿದೆ. ಲಾಕ್ಡೌನ್ನಿಂದ ರೋಗ ತಡೆಯಲು ಸಾಧ್ಯವಾಗುವುದಿಲ್ಲ. ಜನರಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಹೆಚ್ಚಾಗಬೇಕು. ಕೇಂದ್ರ ಸರ್ಕಾರ ಈ ಸಮಯವನ್ನ ಬಳಸಿಕೊಂಡು ಕಾನೂನಿನ ತುರ್ತುಸ್ಥಿತಿ ಬದಲಾಯಿಸಿ, ಬಂಡವಾಳಗಾರರಿಗೆ ಲಾಭ ಮಾಡಿಕೊಡುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.