ತುಮಕೂರು: ಜಿಲ್ಲೆಯಲ್ಲಿ ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ನಡೆಸುವ ಮೂಲಕ ರೈತರ ಜಮೀನನ್ನು ಕಬಳಿಸಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಕೃಷಿ ರೈತಬಂಧು ವೇದಿಕೆಯ ಜಿಲ್ಲಾಧ್ಯಕ್ಷ ಯೋಗೀಶ್ ಮೇಳೆಕಲ್ಲಹಳ್ಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಯೋಗೀಶ್, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಯಾವುದೇ ಹಂಗಿಲ್ಲದೆ ನಡೆಯುತ್ತಿದೆ. ಆ ಭಾಗದ ಜಮೀನಿನ ರೈತರನ್ನು ವಶಕ್ಕೆ ಪಡೆದುಕೊಂಡು ಅವರ ಜಮೀನನ್ನು ಕಸಿದುಕೊಳ್ಳುತ್ತಿರುವುದು ದಂಧೆಯಾಗಿ ಬೆಳೆದಿದೆ. ಇದರಿಂದ ಅನೇಕ ರೈತರು ಸಮಸ್ಯೆಗಳಿಗೆ ಸಿಲುಕುವಂತಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಿರಾ ತಾಲೂಕಿನ ಹುಂಜನಾಳು ಗ್ರಾಮದ ರೈತ ಈರಣ್ಣ ಮಾತನಾಡಿ, 2015ರಲ್ಲಿ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅದೇ ಗ್ರಾಮದ ಶಿವಗಂಗಯ್ಯ ಎಂಬುವರ ಬಳಿ 2 ಲಕ್ಷ ಸಾಲ ಕೇಳಿದಾಗ 1ಲಕ್ಷ 80ಸಾವಿರ ರೂ. ನೀಡಿದರು. ಆಗಿನಿಂದಲೂ ನಾನು ನನ್ನ ಹೆಂಡತಿ ಇಬ್ಬರೂ ಅವರ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದೇವೆ. ಕೆಲಸಕ್ಕೆ ಸಂಬಳ ಎಂದು ಇಲ್ಲಿಯವರೆಗೂ ನೀಡಿಲ್ಲ. 1ಲಕ್ಷ ಹಣವನ್ನು ನೀಡಿದ್ದೇವೆ, ಈ ಹಣವೆಲ್ಲವೂ ಬಡ್ಡಿಗೆ ಸರಿಯಾಗಿದೆ ಎನ್ನುತ್ತಿದ್ದಾರೆ.
ಅಲ್ಲದೆ ಕಳೆದ ನಾಲ್ಕು ವರ್ಷಗಳಿಂದ ನಮ್ಮ ಹುಣಸೆಮರದ ಹಣ್ಣನ್ನು ಅವರೆ ಮಾರಾಟ ಮಾಡಿಕೊಂಡಿದ್ದಾರೆ. ಸಾಲ ನೀಡುವಾಗ ಒಪ್ಪಂದದ ಪತ್ರವೆಂದು ಹೇಳಿ ಜಮೀನನ್ನೇ ಬರೆಸಿಕೊಂಡಿದ್ದಾರೆ. ಈಗ ನೋಡಿದರೆ 9ಲಕ್ಷದ 80ಸಾವಿರ ರೂ. ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಗುಬ್ಬಿ ತಾಲೂಕಿನ ಇಡಕನಹಳ್ಳಿ ಗ್ರಾಮದ ಶಂಕರಲಿಂಗಪ್ಪ ಎಂಬುವರು ಅದೇ ಗ್ರಾಮದ ನಿಂಗಣ್ಣ ಎಂಬುವರ ಬಳಿ ₹10 ಲಕ್ಷ ಸಾಲ ಪಡೆದು, ಜಮೀನನ್ನು ಕ್ರಯಕ್ಕೆ ಬರೆದುಕೊಟ್ಟಿದ್ದೆವು. ಅಂದಿನಿಂದಲೂ ಬಡ್ಡಿ ನೀಡುತ್ತಾ ಬಂದಿದ್ದರೂ, ಸಹ ಕಿರುಕುಳ ಅನುಭವಿಸುವಂತಾಗಿದೆ. ಈಗಾಗಲೇ ಬಡ್ಡಿಯ ರೂಪದಲ್ಲಿ 30 ಲಕ್ಷ ಹಣವನ್ನು ನೀಡಿದ್ದೇವೆ. ಈಗ ಅಸಲು ಮತ್ತು ಬಡ್ಡಿಯನ್ನು ಕೊಡುತ್ತೇವೆ. ನಮ್ಮ ಜಮೀನಿನ ಕ್ರಯಪತ್ರ ನೀಡಿ ಎಂದರೆ 1ಕೋಟಿ 25ಲಕ್ಷ ಹಣ ನೀಡಿದರೆ ಕೊಡುತ್ತೇವೆ. ಇಲ್ಲವಾದರೆ ಬೇರೆಯವರಿಗೆ ಮಾರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಶಂಕರಲಿಂಗಪ್ಪನವರು ತಿಳಿಸಿದ್ದಾರೆ.