ತುಮಕೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ನಡೆಸುತ್ತಿದ್ದ ಧರಣಿ ವೇಳೆ ಸಚಿವ ಮಾಧುಸ್ವಾಮಿ ಅವರ ಕಾರು ಅಡ್ಡಗಟ್ಟಿ ಮನವಿ ಪತ್ರ ಸಲ್ಲಿಸಲು ಮುಂದಾದಾಗ ರೈತ ಸಂಘದ ಮುಖಂಡರು ಹಾಗೂ ಸಚಿವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ರೈತ ಸಂಘದ ಮುಖಂಡರೊಂದಿಗೆ ಹೋರಾಟಗಾರ ಯತಿರಾಜ ಕೂಡ ಭಾಗವಹಿಸಿದ್ದರು. ಒಂದು ಹಂತದಲ್ಲಿ ಸಚಿವರು ಹೋರಾಟಗಾರ ಯತಿರಾಜ್ ಅವರನ್ನು ಏರು ಧ್ವನಿಯಲ್ಲಿ ಮಾತನಾಡಿಸುತ್ತಿದ್ದಂತೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ನನ್ನ ಮಾತನ್ನು ಪೂರ್ಣ ಕೇಳಿ ಎಂದು ಸಚಿವರು ಹೋರಾಟಗಾರರಿಗೆ ಹೇಳಿದರು. ಇದಕ್ಕೆ ಪ್ರತ್ಯುತ್ತರವಾಗಿ ಹೋರಾಟಗಾರರು ಸಹ ನಮ್ಮ ಮಾತನ್ನು ಕೂಡ ಪೂರ್ಣವಾಗಿ ಕೇಳಿ ಎಂದು ಹೇಳಿದರು. ಇದರಿಂದ ಕೊಂಚ ವಿಚಲಿತರಾದ ಸಚಿವ ಮಾಧುಸ್ವಾಮಿ ಸ್ಥಳದಿಂದ ಹೊರಟರು. ಈ ವೇಳೆ ಹೋರಾಟಗಾರರು ಸಚಿವರ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.